ಕೇಂದ್ರ ಸಚಿವರು, ಭಾರಿ ಉದ್ಯಮ ಮತ್ತು ಉಕ್ಕು ಸಚಿವಾಲಯ
ಭಾರತ ಸರ್ಕಾರ, ನವದೆಹಲಿ
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ಬೆಂಗಳೂರು.
ದಿನಾಂಕ: 22-06-2026
ದಿನಾಂಕ: 22-06-2026ರ ತಮ್ಮ ಪತ್ರದಲ್ಲಿ, ವಿಧಾನಸೌಧದಲ್ಲಿ ದಿನಾಂಕ: 26-06-2026ರಂದು ಬೆಳಿಗ್ಗೆ 11 ಗಂಟೆಗೆ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಸಭೆಗೆ ನನ್ನನ್ನು ಮತ್ತು ನನ್ನ ತಂಡದ ಐವರು ಪ್ರತಿನಿಧಿಗಳೊಂದಿಗೆ ಚರ್ಚೆಗೆ ಆಹ್ವಾನಿಸಿರುವ ಪತ್ರವು ನನ್ನ ಕೈಸೇರಿದೆ.
ತಮ್ಮ ಆಹ್ವಾನಕ್ಕೆ ನಾನು ಕೃತಜ್ಞನಾಗಿದ್ದೇನೆ.
ಬಿಡದಿ ಸಮಗ್ರ ಉಪನಗರ (ಟೌನ್ಶಿಪ್) ಯೋಜನೆಯ ಅನುಷ್ಠಾನದಿಂದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಮತ್ತು ಇತರ ಪಾಲುದಾರರು ಹಲವಾರು ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಭಾರೀ ಹಾನಿಯಾಗುವ ಭೀತಿ ಇದೆ.
ಈ ಹಿನ್ನೆಲೆಯಲ್ಲಿ, ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಭೈರಮಂಗಲದ ಯಾವುದೇ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಕರೆಯುವುದು ಹೆಚ್ಚು ಸಮಂಜಸ ಎಂದು ನನಗೆ ಅನಿಸುತ್ತದೆ.
ಮೇಲೆ ಸೂಚಿಸಿದ ಸ್ಥಳಗಳಲ್ಲಿ ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಮತ್ತು ಇತರ ಬಾಧಿತ ಪಾಲುದಾರರಿಗೆ ಭಾಗವಹಿಸಲು ಅವಕಾಶ ನೀಡಿದಲ್ಲಿ, ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು ಆಗಿದೆ.
ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂಬುದನ್ನು ಈ ಪತ್ರದ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.
ಮುಂದುವರೆದು, ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೆ ಅವರನ್ನು ಹೊರಗಿಟ್ಟು ಸಭೆ ನಡೆಸುವುದರಿಂದ ಸಭೆಯು ಫಲಪ್ರದವಾಗುವುದಿಲ್ಲ.
ತಾವು ನಿಗದಿಪಡಿಸಿದ ದಿನಾಂಕ: 26-06-2026 ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಈ ಉದ್ದೇಶಿತ ಸಭೆಯನ್ನು ದಿನಾಂಕ: 27-06-2026 ರಂದು, ಮೇಲೆ ತಿಳಿಸಿದಂತೆ ಬಿಡದಿ ಅಥವಾ ಭೈರಮಂಗಲದ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಆಯೋಜಿಸಿ, ಮೇಲೆ ಕಾಣಿಸಿದ ಬಾಧಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಈ ಮೂಲಕ ಕೋರುತ್ತೇನೆ.
ಬಾಧಿತ ರೈತರು ಮತ್ತು ಸ್ಥಳೀಯರೊಂದಿಗೆ ನೇರ ಸಂವಾದವು ಯೋಜನೆಯ ನಿಜವಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮರ್ಥನೀಯ ಪರಿಹಾರಗಳನ್ನು ಕಂಡುಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದು ಸುಶಾಸನ ಮತ್ತು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ.
ಹೆಚ್.ಡಿ. ಕುಮಾರಸ್ವಾಮಿ
ಸತ್ಯಮೇವ ಜಯತೇ
ಕೇಂದ್ರ ಸಚಿವರು
ಭಾರಿ ಉದ್ಯಮ ಮತ್ತು ಉಕ್ಕು ಸಚಿವಾಲಯ
ಭಾರತ ಸರ್ಕಾರ, ನವದೆಹಲಿ

Post a Comment