Top News

ಅರಣ್ಯದಂಚಿನ ಆದಿವಾಸಿಗಳಿಗೆ ಸ್ವಂತ ಸೂರು: ಚಾಮರಾಜನಗರ ಜಿಲ್ಲೆಗೆ 593 ಮನೆಗಳ ಮಂಜೂರಾತಿ

ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ: ಚಾಮರಾಜನಗರ ಜಿಲ್ಲೆಗೆ 593 ಮನೆಗಳು ಮಂಜೂರು | ಕರ್ನಾಟಕ ನ್ಯೂಸ್ 24 ಲೈವ್
ವೇಗವಾದ ಮಾಹಿತಿ | ಜನರ ವಿಶ್ವಾಸ | ಕನ್ನಡದ ನಿಖರ ಸುದ್ದಿ

ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ: ಚಾಮರಾಜನಗರ ಜಿಲ್ಲೆಗೆ 593 ಮನೆಗಳು ಮಂಜೂರು

ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಚಾಮರಾಜನಗರ ಜಿಲ್ಲೆಗೆ 593 ಮನೆಗಳು ಮಂಜೂರಾಗಿದ್ದು, ಆದಿವಾಸಿಗಳ ಮನೆ ನಿರ್ಮಾಣ ಕಾಮಗಾರಿ ಸೇರಿದಂತೆ ಮೂಲಸೌಕರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಜಿಲ್ಲೆಯ ಆದಿವಾಸಿಗಳಿಗೆ ಮನೆ ನಿರ್ಮಾಣ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮುಂದಿನ ಪ್ರಕ್ರಿಯೆಗಳ ಕುರಿತು ಎಲ್ಲಾ ಶಾಸಕರ ಸಮ್ಮುಖದಲ್ಲಿ ವ್ಯಾಪಕವಾಗಿ ಚರ್ಚಿಸಿದರು.

🏠 ಆದಿವಾಸಿ ಗೃಹಭಾಗ್ಯ ಯೋಜನೆ – 593 ಮನೆಗಳ ಮಂಜೂರಾತಿ
ಚಾಮರಾಜನಗರ ಜಿಲ್ಲೆ | ಅರಣ್ಯ ಇಲಾಖೆ ಸಹಕಾರ ಅಗತ್ಯ | ರಾಜೀವಗಾಂಧಿ ವಸತಿ ನಿಗಮಕ್ಕೆ ಉಸ್ತುವಾರಿ

ಏನಾಯಿತು?

ಸರ್ಕಾರವು 2025-26ನೇ ಸಾಲಿನ ಆಯವ್ಯಯದಲ್ಲಿ ಅರಣ್ಯ ಹಾಗೂ ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಜನರಿಗೆ ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಘೋಷಣೆ ಮಾಡಿತ್ತು. ಈ ಸಂಬಂಧ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತದಿಂದ ಆದಿವಾಸಿಗಳ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತುತ ಚಾಮರಾಜನಗರ ಜಿಲ್ಲೆಗೆ ಮೊದಲ ಹಂತದಲ್ಲಿ 593 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ ಎಂದು ಸಚಿವರು ತಿಳಿಸಿದರು.

ನಿವೇಶನ ಲಭ್ಯವಿದ್ದು ಮನೆ ಇಲ್ಲದ ಕುಟುಂಬಗಳು ಹಾಗೂ ನಿವೇಶನ ಮತ್ತು ಮನೆ ಎರಡೂ ಇಲ್ಲದ ಕುಟುಂಬಗಳ ತಾಲೂಕುವಾರು ಜಿಲ್ಲೆಯಲ್ಲಿ 2995 ಮನೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 593 ಮನೆಗಳ ನಿರ್ಮಾಣ ಜಿಲ್ಲೆಗೆ ನಿಗದಿಯಾಗಿದೆ. ಮಂಜೂರಾಗಿರುವ ಮನೆಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕಿದೆ. ಮನೆ ನಿರ್ಮಾಣ ಉಸ್ತುವಾರಿಯನ್ನು ರಾಜೀವಗಾಂಧಿ ವಸತಿ ನಿಗಮಕ್ಕೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಮುಖ ಮಾಹಿತಿ

ಯೋಜನೆ: ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ
ಜಿಲ್ಲೆ: ಚಾಮರಾಜನಗರ
ಮಂಜೂರಾದ ಮನೆಗಳು: 593 (ಮೊದಲ ಹಂತ)
ಒಟ್ಟು ಪ್ರಸ್ತಾವನೆ: 2995 ಮನೆಗಳು
ಉಸ್ತುವಾರಿ: ರಾಜೀವಗಾಂಧಿ ವಸತಿ ನಿಗಮ
ಸಭೆಯ ಅಧ್ಯಕ್ಷತೆ: ಸಿ. ಪುಟ್ಟರಂಗಶೆಟ್ಟಿ – ಜಿಲ್ಲಾ ಉಸ್ತುವಾರಿ ಸಚಿವರು
ದಿನಾಂಕ: ಸೆಪ್ಟೆಂಬರ್ 20, 2026
ಮೂಲ: ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ

ಸಚಿವರ ನಿರ್ದೇಶನಗಳು

📋 ಸಭೆಯ ಪ್ರಮುಖ ಅಂಶಗಳು
▪️ ಸೂರಿಗಾಗಿ ತುಂಬಾ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಬೇಕು
▪️ ಶಿಥಿಲಾವಸ್ಥೆಯಲ್ಲಿರುವ ಮನೆಗಳ ಮರು ನಿರ್ಮಾಣಕ್ಕೆ ಆದ್ಯತೆ ನೀಡಬೇಕು
▪️ ಭೂತಾಣಿಪೋಡು, ಬೇಡಗುಳಿ, ಹೊಸಪೋಡು, ಕೆ. ಗುಡಿ ಸೇರಿದಂತೆ ಕೆಲ ಹಾಡಿ-ಪೋಡುಗಳಲ್ಲಿ ಆದಿವಾಸಿಗಳಿಗೆ ಮನೆ ತುರ್ತಾಗಿ ಆಗಬೇಕು
▪️ ಅರಣ್ಯದಂಚಿನ ಕೆಲ ಹಾಡಿಗಳ ಆದಿವಾಸಿಗಳಿಗೆ ಜಾಗದ ಅಸೆಸ್‌ಮೆಂಟ್ ಇನ್ನೂ ಲಭ್ಯವಾಗಿಲ್ಲ
▪️ ಸಂಬಂಧಪಟ್ಟ ಗ್ರಾಮಪಂಚಾಯಿತಿಗಳಿಂದ ಅಸೆಸ್‌ಮೆಂಟ್ ವಿತರಿಸಲು ಅಧಿಕಾರಿಗಳಿಗೆ ಸೂಚನೆ
▪️ ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರೊಂದಿಗೆ ಜಿಲ್ಲೆಗೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು
▪️ ಆದಿವಾಸಿಗಳು ವಾಸಿಸುವ ವ್ಯಾಪ್ತಿಯೊಳಗೆ ಉತ್ತಮ ಮನೆ ಕಟ್ಟಿಕೊಳ್ಳುವ ಕಾಮಗಾರಿ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಸಹಕರಿಸಬೇಕು

ಶಾಸಕರ ಅಭಿಪ್ರಾಯ

ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಗಳು ಹಿಂದಿನ ದಿನಗಳಲ್ಲಿ ಪ್ರಭಾವಿಯಾಗಿರಲಿಲ್ಲ. ಈಗ ಸಾಕಷ್ಟು ಕಠಿಣವಾಗಿವೆ. ಆದಿವಾಸಿಗಳ ಮನೆ ನಿರ್ಮಾಣ ಕಾರ್ಯ ಯಾವುದೇ ಅಡೆತಡೆಗಳಿಲ್ಲದೇ ಸುಸೂತ್ರವಾಗಿ ಆಗಬೇಕು ಎಂದರು.

ಉಪಸ್ಥಿತರಿದ್ದ ಗಣ್ಯರು

ಲೋಕಸಭಾ ಸದಸ್ಯರಾದ ಸುನೀಲ್‌ಬೋಸ್, ಶಾಸಕರಾದ ಎಚ್.ಎಂ. ಗಣೇಶ್‌ಪ್ರಸಾದ್, ಎಂ.ಆರ್. ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಧಿಕಾರಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂಧ್ಯಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ವೆಂಕಟೇಶ್, ತಹಶೀಲ್ದಾರರಾದ ಬಿ. ಗಿರಿಜಾ, ಬಸವರಾಜು, ಚೈತ್ರಾ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಬೆಳವಣಿಗೆ

ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರುಗಳೊಂದಿಗೆ ಜಿಲ್ಲೆಗೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಾಗಿದೆ. ಅಲ್ಲದೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮುಖ್ಯವಾಗಿ ಆದಿವಾಸಿಗಳು ವಾಸಿಸುವ ವ್ಯಾಪ್ತಿಯೊಳಗೆ ಉತ್ತಮ ಮನೆ ಕಟ್ಟಿಕೊಳ್ಳುವ ಕಾಮಗಾರಿ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸಲು ತೊಂದರೆಯಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕರ್ನಾಟಕ ನ್ಯೂಸ್ 24 ಲೈವ್
Karnataka News 24 Live | News Desk

Post a Comment

Previous Post Next Post