ಬೆಂಗಳೂರು, ಮಾರ್ಚ್ 31: ಮುಂದಿನ ಶೈಕ್ಷಣಿಕ ಸಾಲಿನಿಂದ (2026-27) ರಾಜ್ಯದಲ್ಲಿ ದ್ವಿಭಾಷಾ ತರಗತಿಗಳನ್ನು ವಿಸ್ತರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ 1,55,950 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಈ ತರಬೇತಿಯನ್ನು ಆಯೋಜಿಸಿದೆ. ಇಂಗ್ಲಿಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್ (ಇಎಂಟಿಟಿ) ಎಂಬ ಹೆಸರಿನಡಿಯಲ್ಲಿ ನಡೆಯುತ್ತಿರುವ ಈ ತರಬೇತಿಯು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೂ ಮೊದಲೇ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿಭಾಷಾ ತರಗತಿಗಳ ಯಶಸ್ವಿ ಅನುಷ್ಠಾನಕ್ಕೆ ಶಿಕ್ಷಕರ ಸನ್ನದ್ಧತೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಭಾಷಾ ಕೌಶಲ್ಯ, ಬೋಧನಾ ವಿಧಾನ ಮತ್ತು ಪಠ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ. ತರಬೇತಿಯು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಶಿಕ್ಷಕರು ಸಮರ್ಪಕವಾಗಿ ತರಬೇತಿ ಪಡೆಯುವಂತೆ ಡಿಎಸ್ಇಆರ್ಟಿ ಕ್ರಮ ಕೈಗೊಂಡಿದೆ.
ರಾಜ್ಯದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಈ ಹೆಜ್ಜೆಯು ಮಹತ್ವದ ಪರಿವರ್ತನೆಯಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ತರಬೇತಿ ನೆರವಾಗಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Post a Comment