Top News

ಚಪ್ಪಲಿ ಎಸೆತದಿಂದ 'ಜೈ ಒಬಿಸಿ'ವರೆಗೆ: ಪ್ರದೀಪ್ ಈಶ್ವರ್ ಅವರ ಆತ್ಮರಕ್ಷಣೆಯ ಅನಿವಾರ್ಯ ಕೂಗು"

ಪ್ರದೀಪ್ ಈಶ್ವರ್ ಚಪ್ಪಲಿ ಎಸೆತ ಪ್ರಕರಣ: ಗೂಂಡಾಗಿರಿಯ ವಿರುದ್ಧ ಅನಿವಾರ್ಯ ಆತ್ಮರಕ್ಷಣೆಯ ಕೂಗು – ಯತಿರಾಜ್ ಬ್ಯಾಲಹಳ್ಳಿ ವಿಶ್ಲೇಷಣೆ | ಕರ್ನಾಟಕ ನ್ಯೂಸ್ 24 ಲೈವ್
🔴 ವಿಶ್ಲೇಷಣೆ – ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಚಪ್ಪಲಿ ಪ್ರಕರಣ
ವೇಗವಾದ ಮಾಹಿತಿ | ಜನರ ವಿಶ್ವಾಸ | ಕನ್ನಡದ ನಿಖರ ಸುದ್ದಿ
📅 ಜುಲೈ 2, 2026 | ವಿಶೇಷ ಲೇಖನ ✍️ ಲೇಖಕರು: ಯತಿರಾಜ್ ಬ್ಯಾಲಹಳ್ಳಿ
ಪ್ರದೀಪ್ ಈಶ್ವರ್ 'ಜೈ ಎಸ್ಸಿ, ಎಸ್ಟಿ, ಜೈ ಒಬಿಸಿ' ಘೋಷಣೆ: ಗೂಂಡಾಗಿರಿಯ ಎದುರು ಅನಿವಾರ್ಯ ಆತ್ಮರಕ್ಷಣೆಯ ಕೂಗು – ಯತಿರಾಜ್ ಬ್ಯಾಲಹಳ್ಳಿ ವಿಶ್ಲೇಷಣೆ
ಜೂನ್ 27ರ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಮತ್ತು ಗೂಂಡಾಗಿರಿ ಘಟನೆ ಕುರಿತು ಆರಂಭಿಕ ತಕರಾರುಗಳ ನಂತರದ ಪುನರ್ವಿಮರ್ಶೆ. "ಜಾತಿ ಸೂಕ್ಷ್ಮಗಳನ್ನು ಮರೆಯಬಾರದು" ಎಂಬ ಕಾಳಜಿಯಿಂದ ಹೊರಟ ಲೇಖಕರ ದೃಷ್ಟಿಕೋನ ಘಟನೆಯ ವಿವರಗಳ ಅಧ್ಯಯನದ ನಂತರ ಹೇಗೆ ಬದಲಾಯಿತು ಎಂಬ ವಿವರ.

ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅವರು ಜೂನ್ 27ರ ಘಟನೆಯ ಸಂದರ್ಭದಲ್ಲಿ 'ಜೈ ಎಸ್ಸಿ, ಎಸ್ಟಿ, ಜೈ ಒಬಿಸಿ' ಎಂದು ಕೂಗಿದ್ದರ ಬಗ್ಗೆ ತಕರಾರು ತೆಗೆದವರಲ್ಲಿ ನಾನೂ ಒಬ್ಬ. "ಜಾತಿ ಸೂಕ್ಷ್ಮಗಳನ್ನು ನಾವು ಮರೆಯಬಾರದು" ಎಂಬುದು ನನ್ನ ಕಾಳಜಿಯಾಗಿತ್ತು. ಆದರೆ ಘಟನೆಯ ವಿವರಗಳನ್ನು ಅಧ್ಯಯನ ಮಾಡಿದ ಮೇಲೆ ಪ್ರದೀಪ್ ಈಶ್ವರ್ ಅವರು ಯಾಕೆ ಹೀಗೆ ವರ್ತಿಸಿದರು ಎಂಬುದನ್ನು ಭಿನ್ನವಾಗಿ ನೋಡಲು ಸಾಧ್ಯವಾಗಿದೆ.

📋 ಘಟನೆಯ ಹಿನ್ನೆಲೆ – ಏನಾಯಿತು ಅಂದು?

▪️ ಸ್ಥಳ: ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮ
▪️ ಘಟನೆ: ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊಡೆಯಲೆಂದೇ ಬಂದಿದ್ದರು
▪️ ಅವಮಾನ: ಚಪ್ಪಲಿ ಎಸೆತ, ಕೆಟ್ಟ ಪದಗಳಿಂದ ನಿಂದನೆ
▪️ ಸ್ಥಿತಿ: ಹಲವರು ಕುಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ
▪️ ಸಹನೆ: ಸುಮಾರು ಎರಡು ಗಂಟೆಗಳ ಕಾಲ ಪ್ರದೀಪ್ ಈಶ್ವರ್ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದರು

ಅದೊಂದು ಸರ್ಕಾರಿ ಕಾರ್ಯಕ್ರಮ. ಪ್ರದೀಪ್ ಈಶ್ವರ್ ಆ ಕ್ಷೇತ್ರದ ಶಾಸಕ ಎಂಬುದನ್ನು ಗಲಾಟೆ ಮಾಡಿದವರು ಮರೆತ್ತಿದ್ದರು. ರಾಜಕೀಯ ಹೇಳಿಕೆಗಳನ್ನು ಎದುರಿಸಲು ಹೀಗೆ ಗೂಂಡಾಗಿರಿ ಮಾಡುವ ಅಗತ್ಯವಿರಲಿಲ್ಲ. ದಂಡುದಂಡಾಗಿ ಬಂದು, ದಾಂಧಲೆ ಎಬ್ಬಿಸಿ, ಸೊಂಟದ ಕೆಳಗಿನ ಭಾಷೆಯಲ್ಲಿ ನಿಂದಿಸಿ ಅವಮಾನಿಸಿದಾಗ ಪ್ರದೀಪ್ ಈಶ್ವರ್ ಅವರ ಸ್ಥಿತಿ ಏನಾಗಿರಬಹುದು? ಸಿದ್ದರಾಮಯ್ಯನವರ ಎದುರು ಪ್ರದೀಪ್ ಕಣ್ಣೀರು ಹಾಕಿರುವುದನ್ನು ನೆನೆದರೆ ಪ್ರದೀಪ್ ಅವರು ಎದುರಿಸಿರುವ ಹತಾಶೆಯನ್ನು ಅಂದಾಜು ಮಾಡಬಹುದಲ್ಲವೇ?

💬 ಗೂಂಡಾಪಡೆಯ ಮನಸ್ಥಿತಿ:

ಸಭಾಂಗಣದೊಳಗೆ ಬಂದು ಗಲಭೆ ಎಬ್ಬಿಸಿದ್ದ ಈ ಮಂದಿ, "ಇದು ಕೆಂಪೇಗೌಡರ ಜಯಂತಿ, ಅಂಬೇಡ್ಕರ್ ಜಯಂತಿ ಅಲ್ಲ. ನೀನೇಕೆ ಇಲ್ಲಿಗೆ ಬಂದಿದ್ದೀಯ?" ಎಂದು ಶಾಸಕರನ್ನು ಕೇಳುತ್ತಾರೆಂದರೆ, ಆ ಗೂಂಡಾಪಡೆಯ ಮನಸ್ಥಿತಿ ಯಾವುದಾಗಿತ್ತು? ಅವರ ಉದ್ದೇಶ ಏನಿತ್ತು? ಅಂಬೇಡ್ಕರ್ ವರ್ಸಸ್ ಕೆಂಪೇಗೌಡ ಎನ್ನುತ್ತಿದ್ದ ಆ ಜನರನ್ನು ನೋಡಿ ಈಶ್ವರ್ ಅವರಿಗೆ ಒಂದು ಕ್ಷಣ, "ನಾನು ಎಸ್ಸಿ, ಎಸ್ಟಿ, ಒಬಿಸಿಗಳ ಹೆಸರಿನಲ್ಲೇ ಆಶ್ರಯಪಡೆಯಬೇಕು" ಅನಿಸಿದ್ದರೆ ಆಶ್ಚರ್ಯಪಡಬೇಕಿಲ್ಲ.
🧠 ವಿಶ್ಲೇಷಣೆ: ಅನಿವಾರ್ಯತೆಯ ರಕ್ಷಣಾ ಕವಚ

"ನೀವು ನನ್ನ ವಿರುದ್ಧ ಬಂದರೆ, ನನ್ನ ಜೊತೆಯೂ ಜನ ಇದ್ದಾರೆ" ಎಂದು ಆ ಕ್ಷಣಕ್ಕೆ ಹೇಳಿಕೊಳ್ಳುವ ಒತ್ತಡವನ್ನು ಈ ಗೂಂಡಾಪಡೆ ಸೃಷ್ಟಿಸಿತ್ತು! ಸಮುದಾಯಗಳನ್ನು ಎತ್ತಿಕಟ್ಟುವ ಉದ್ದೇಶಪೂರ್ವಕ ನಡೆ ಅದಾಗಿದ್ದರೆ, ಬಹುಶಃ ಪ್ರದೀಪ್ ಈಶ್ವರ್ ಅವರಿಗೆ ಒಬಿಸಿ ನಾಯಕರ ಎದುರು ಕಣ್ಣೀರು ಬರುತ್ತಿರಲಿಲ್ಲ. ಅವರು ದಾಳಿಯಿಂದ ಪಾರಾಗಲು ಸಮುದಾಯಗಳನ್ನು ಆಶ್ರಯಿಸಲೇಬೇಕಿತ್ತು.

ಸರ್ಕಾರಿ ಕಾರ್ಯಕ್ರಮಕ್ಕೆ ಒಬ್ಬ ಶಾಸಕ ಬರಬಾರದು ಎಂದು ಹೇಳಲು ಇವರ್ಯಾರು? ಹಲ್ಲೆ ಮಾಡಲೆಂದೇ ಬಂದಿದ್ದ ಈ ಮಂದಿಯ ಎದುರು, ಹೆದರಿಕೊಂಡು ಹೋಗುವ ಬದಲು, ಅನಿವಾರ್ಯವಾಗಿ ಪ್ರದೀಪ್ ಈಶ್ವರ್ ಸಮುದಾಯಗಳನ್ನು ಮುಂದೆ ತಂದು ರಕ್ಷಣೆ ಪಡೆಯಲು ಯತ್ನಿಸಿದ್ದಾರೆ. ಆ ಧೈರ್ಯದಲ್ಲಿ ತೊಡೆ ತಟ್ಟಿದ್ದಾರೆ, ಮೀಸೆ ತಿರುವಿದ್ದಾರೆ.

🌟 ಪ್ರಕೃತಿ ನಿಯಮ: ಅಸ್ತಿತ್ವಕ್ಕೆ ಅಪಾಯವಾದಾಗ ಪ್ರತಿರೋಧ ಅನಿವಾರ್ಯ

ಯಾವುದೇ ಜೀವಿಯು ತನ್ನ ಅಸ್ತಿತ್ವಕ್ಕೆ ಅಪಾಯ ಎದುರಾದಾಗ ತನ್ನೊಳಗಿರುವ ಭಯ, ಆತಂಕದಿಂದ ಯಾವುದಾದರೂ ಪ್ರತಿರೋಧದ ಹಾದಿಯನ್ನು ಕಂಡುಕೊಳ್ಳುತ್ತದೆ. ಪ್ರದೀಪ್ ಈಶ್ವರ್ ಮಾಡಿದ್ದು ಅದೇ ತಾನೇ? ಪ್ರದೀಪ್ ಈಶ್ವರ್ ಜೈಕಾರ ಕೂಗಿದ್ದು, ಮೀಸೆ ತಿರುವಿದ್ದು ತಪ್ಪೆನ್ನುವ ಮಂದಿ, ಆ ಸಭಾಂಗಣದ ಒಳಗೆ ನಡೆದ ದಬ್ಬಾಳಿಕೆ ಬಗ್ಗೆ ಚಕಾರವೆತ್ತುತ್ತಿಲ್ಲ. ಅಂದರೆ ಇವರು ಮಾಡಿದ್ದೆಲ್ಲ ಸರಿ ಎಂದು ಒಪ್ಪಿಕೊಳ್ಳಬೇಕೆ? ಇವರು ನಡೆಸಿಕೊಂಡಂತೆ ನಡೆದುಕೊಳ್ಳಬೇಕೆ? ಇದೇ ಅಲ್ಲವೆ ಫ್ಯೂಡಲಿಸಂ?
📌 ಅಂತಿಮ ವಿಶ್ಲೇಷಣೆ ಮತ್ತು ರಾಜಕೀಯ ಪರಿಣಾಮ:

1. ದುರುದ್ದೇಶ: ಅಂದು ಪ್ರದೀಪ್ ಈಶ್ವರ್ ಅವರನ್ನು ಒಂಟಿಯಾಗಿ ನಿಲ್ಲಿಸಿ ಹೊಡೆಯುವ ದುರುದ್ದೇಶವಿತ್ತು. ಅವರನ್ನು ಹತಾಶೆಗೆ ದೂಡಲಾಗಿತ್ತು.

2. ಒಗ್ಗಟ್ಟಿನ ಅಗತ್ಯ: ಈ ಕಾರಣಕ್ಕಾಗಿಯೇ ಅವರ ಪರವಾಗಿ ಒಬಿಸಿ ನಾಯಕರು ಮತ್ತು ನಾವು ನಿಲ್ಲಬೇಕಾಗಿದೆ, ನಿಂತಿದ್ದೇವೆ ಕೂಡ.

3. ವರ್ಚಸ್ಸಿನ ಮರುಸಂಘಟನೆ: ಜೂನ್ 27ರ ಘಟನೆ ಪ್ರದೀಪ್ ಈಶ್ವರ್ ಅವರಿಗೆ ನಷ್ಟವನ್ನೇನೂ ಉಂಟು ಮಾಡಿಲ್ಲ. ಕಳೆದು ಹೋಗುತ್ತಿದ್ದ ವರ್ಚಸ್ಸನ್ನು ಮರುಸಂಘಟಿಸಲು ಈ ಘಟನೆ ಪ್ರದೀಪ್ಗೆ ವರದಾನವೂ ಆಗಿದೆ.

4. ಜನರ ಪ್ರತಿಕ್ರಿಯೆ: ಕ್ಷೇತ್ರದ ಜನ ಗೂಂಡಾಗಿರಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವರ್ತನೆಯ ಕುರಿತು ಬೇಸರದಿಂದ ಮಾತನಾಡುತ್ತಿದ್ದಾರೆ.

5. ಭವಿಷ್ಯದ ಆತಂಕ: ಅಧಿಕಾರ ಇಲ್ಲದೆಯೇ ಹೀಗೆ ಆಡುತ್ತಿರುವವರು ಅಧಿಕಾರ ಸಿಕ್ಕರೆ ಇನ್ನೇನು ಮಾಡಬಲ್ಲರು ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

- ಯತಿರಾಜ್ ಬ್ಯಾಲಹಳ್ಳಿ
(Facebook ಬಳಕೆದಾರರ ವಿಮರ್ಶೆ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕೆಂಪೇಗೌಡ ಜಯಂತಿ ಚಪ್ಪಲಿ ಪ್ರಕರಣದ ಕುರಿತು)

*ಗೂಂಡಾಗಿರಿಯ ವಿರುದ್ಧ ಧ್ವನಿ ಎತ್ತಿ – ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ.*

Post a Comment

Previous Post Next Post