ಚಿಕ್ಕಬಳ್ಳಾಪುರ -ಎಚ್‌ಎನ್ ವ್ಯಾಲಿ ಯೋಜನೆಯ ನೀರಿಗೆ ತೃತೀಯ ಹಂತದ ಶುದ್ಧೀಕರಣ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಮಾರ್ಚ್ 15ರಂದು ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಮುಖಂಡರಾದ Sandeep B. Reddy ಅವರು ಕಾರ್ಯಕರ್ತರು, ಸಂಘಟಕರು ಹಾಗೂ ವ್ಯಾಪಾರಸ್ಥರೊಂದಿಗೆ ಸಂಚರಿಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನಗರದ ವಿವಿಧ ಭಾಗಗಳಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಬಂದ್‌ನ ಉದ್ದೇಶವನ್ನು ವಿವರಿಸಲಾಯಿತು. ಎಚ್‌ಎನ್ ವ್ಯಾಲಿ ಯೋಜನೆಯಡಿ ಜಿಲ್ಲೆಯತ್ತ ಹರಿಸಲಾಗುತ್ತಿರುವ ನೀರಿಗೆ ತೃತೀಯ ಹಂತದ ಶುದ್ಧೀಕರಣ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೆ ತರಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂದೀಪ್ ಬಿ. ರೆಡ್ಡಿ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನೀರಿನ ಗುಣಮಟ್ಟ ಅತ್ಯಂತ ಪ್ರಮುಖವಾಗಿದ್ದು, ತೃತೀಯ ಶುದ್ಧೀಕರಣ ವ್ಯವಸ್ಥೆ ಇಲ್ಲದೆ ನೀರನ್ನು ಹರಿಸುವುದು ಜನರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಮಾರ್ಚ್ 15ರಂದು ನಡೆಯುವ ಬಂದ್‌ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ಕಾರ್ಯಕರ್ತರು, ಸಂಘಟಕರು ಹಾಗೂ ಸ್ಥಳೀಯ ವ್ಯಾಪಾರಸ್ಥರು ಭಾಗವಹಿಸಿದ್ದರು. ಬಂದ್‌ಗೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.


Post a Comment