ವಿಜಯಪುರ, ಮಾರ್ಚ್ 31: ಮೂಡ ಅಕ್ರಮ ಸೈಟ್ ಹಂಚಿಕೆ ಪ್ರಕರಣದ ತನಿಖೆ ಕೇಂದ್ರ ತನಿಖಾ ದಳ (ಸಿಐಡಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಹೊಸದೊಂದು ಹಗರಣ ಬಯಲಾಗಿದೆ. ಆದರೆ ಈ ಹಗರಣವನ್ನು ಯಾವುದೇ ಮಾಹಿತಿ ಹಕ್ಕು ಕಾರ್ಯಕರ್ತ ಅಥವಾ ಸಾರ್ವಜನಿಕರು ದೂರದ ಬದಲು, ಸ್ವತಃ ಬಿಡಿಎ ಆಯುಕ್ತರೇ 'ಆಡಳಿತಾತ್ಮಕ ದೋಷ'ದ ಬಗ್ಗೆ ದೂರು ನೀಡಿದ್ದಾರೆ ಎಂಬುದು ಸೋಜಿಗದ ಸಂಗತಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, "ಬಿಡಿಎ ಆಯುಕ್ತರು ತಾವೇ ಸ್ವತಃ ಒಂದು ಟಿಪ್ಪಣಿಗೆ ಸಹಿ ಹಾಕಿ, 'ಆಡಳಿತಾತ್ಮಕ ದೋಶದಿಂದಾಗಿ' ಒಂದೇ ಸೈಟನ್ನು 2-3 ಅರ್ಜಿದಾರರಿಗೆ ಮಾರಾಟ ಮಾಡಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಲೋಪದೋಷ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ" ಎಂದು ತಿಳಿಸಿದರು.
ಈ ಸಂಪೂರ್ಣ ಘಟನೆಯ ಬಗ್ಗೆ ಪ್ರಶ್ನಿಸಿದ ಅವರು, "ಇಷ್ಟೆಲ್ಲಾ ಅಕ್ರಮ ನಡೆಯುತ್ತಿರುವಾಗ ಬಿಡಿಎ ಆರಕ್ಷಕ ಇಲಾಖೆಗಾಗಲಿ ಅಥವಾ ಇತರೆ ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ ಸಂಶಯ ಬಾರದೇ ಇರುವುದು ಹೇಗೆ? ಇದಕ್ಕೆ ಆಯುಕ್ತರು ಸ್ಪಷ್ಟನೆ ನೀಡಬೇಕು" ಎಂದು ಪ್ರಶ್ನಿಸಿದರು.
ಕಳೆದ 10 ವರ್ಷದ ನಿವೇಶನ ಹಂಚಿಕೆಗಳ ಆಡಿಟ್ ಆಗಬೇಕು
ಯತ್ನಾಳ್ ಅವರು ಮುಖ್ಯಮಂತ್ರಿಗಳು ಮತ್ತು ಬಿಡಿಎ ಆಯುಕ್ತರಿಗೆ ಮೂರು ಪ್ರಮುಖ ಆಗ್ರಹಗಳನ್ನು ಮಾಡಿದ್ದಾರೆ:
1. ಕಳೆದ 10 ವರ್ಷಗಳಲ್ಲಿ ಬಿಡಿಎ ಮೂಲಕ ಹಂಚಿಕೆಯಾಗಿರುವ ಎಲ್ಲಾ ನಿವೇಶನಗಳ ಸಂಪೂರ್ಣ ಪರಿಶೋಧನೆ (ಆಡಿಟ್) ನಡೆಸಬೇಕು.
2. ಲೋಪದೋಷ ಎಸಗಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
3. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ದೋಷಿಗಳಿಗೆ ಶಿಸ್ತು ಮತ್ತು ಕಾನೂನು ಕ್ರಮ ಜರುಗಿಸಬೇಕು.
"ಮೂಡ ಅಕ್ರಮ ಸೈಟ್ ಹಂಚಿಕೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಬಿಡಿಎಯಲ್ಲಿ ಇಂತಹ ಹೊಸ ಹಗರಣ ಬಯಲಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಸಾರ್ವಜನಿಕರಿಗೆ ಮೋಸ ಮಾಡಿ, ಒಂದೇ ಸೈಟನ್ನು ಬಹುಮಂದಿಗೆ ಮಾರಾಟ ಮಾಡಿರುವುದು ದೊಡ್ಡ ಅಕ್ರಮವಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಯಾರೇ ಆದರೂ ಸರಿ, ಉಳಿಸಬಾರದು" ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.
ಅಧಿಕಾರಿಗಳಿಂದ ಸ್ಪಷ್ಟನೆ ಅಗತ್ಯ
ಬಿಡಿಎ ಆಯುಕ್ತರು ಸ್ವತಃ 'ಆಡಳಿತಾತ್ಮಕ ದೋಷ' ಒಪ್ಪಿಕೊಂಡಿರುವುದರಿಂದ, ಈ ವಿಷಯದಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆ. ಅಲ್ಲದೆ, ಹಲವಾರು ವರ್ಷಗಳಿಂದ ಇಂತಹ ಅಕ್ರಮ ನಡೆಯುತ್ತಿದ್ದರೂ, ಅದು ಗಮನಕ್ಕೆ ಬಾರದೇ ಇರುವುದು ಹೇಗೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಈ ಹೊಸ ಬೆಳವಣಿಗೆಯು ಬಿಡಿಎಯ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಸಲ್ಲಿಸಿ, ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.

Post a Comment