Top News

ಒಳಮೀಸಲಾತಿ ಜಾರಿಗೆ ಮಾರ್ಚ್ 25ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಚಿಕ್ಕಬಳ್ಳಾಪುರದಲ್ಲಿ ಕರಪತ್ರ ಬಿಡುಗಡೆ



 


ಚಿಕ್ಕಬಳ್ಳಾಪುರ / ಬೆಂಗಳೂರು, ಮಾರ್ಚ್ 22: ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟವು ಮಾರ್ಚ್ 25, 2026ರಂದು ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ವಿವಿಧ ದಲಿತ ಸಂಘಟನೆಗಳು (ಡಿಎಸ್ಎಸ್) ಸೇರಿ ಪ್ರತಿಭಟನಾ ಕರಪತ್ರಗಳನ್ನು ಬಿಡುಗಡೆ ಮಾಡಿ, ಸಮುದಾಯದ ಜನರನ್ನು ಬೃಹತ್ ಪ್ರಮಾಣದಲ್ಲಿ ಸೇರಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದವು.


ಚಿಕ್ಕಬಳ್ಳಾಪುರದಲ್ಲಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ಸೇರಿದಂತೆ ವಿವಿಧ ಡಿಎಸ್ಎಸ್ ಸಂಘಟನೆಗಳ ಮುಖಂಡರು ಸಭೆ ಸೇರಿ, ಒಳಮೀಸಲಾತಿ ಹೋರಾಟದ ಸಂದೇಶವನ್ನು ಒಳಗೊಂಡ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಪ್ರತಿಭಟನೆಯ ದಿನಾಂಕ, ಹಕ್ಕೊತ್ತಾಯಗಳು ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಬೇಕಾದ ಸಮಯವನ್ನು ಒಳಗೊಂಡ ಈ ಕರಪತ್ರಗಳನ್ನು ಸಮುದಾಯದ ಪ್ರತಿ ಮನೆಗೂ ತಲುಪಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.


ಮಾರ್ಚ್ 25ರಂದು ಬೆಂಗಳೂರಿನಲ್ಲಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ, ನಂತರ ಮೌರ್ಯ ವೃತ್ತ (ಗಾಂಧಿ ಪ್ರತಿಮೆ), ಗಾಂಧಿನಗರ ಮಾರ್ಗವಾಗಿ ಮುಖ್ಯಮಂತ್ರಿಗಳ ನಿವಾಸದವರೆಗೆ ಮೆರವಣಿಗೆ ನಡೆಸಲಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 10:30ಕ್ಕೆ ಪ್ರತಿಭಟನೆ ಸೇರಲಾಗುವುದು.


ಪ್ರತಿಭಟನೆಯ ಹಿನ್ನೆಲೆಯಾಗಿ ಸರ್ಕಾರವು 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒಳಮೀಸಲಾತಿ ಅಳವಡಿಸದೆ ಆದೇಶ ಹೊರಡಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ. ಒಳಮೀಸಲಾತಿ ಇಲ್ಲದೆ ಈ ನೇಮಕಾತಿ ಮುಂದುವರಿಸಿದರೆ ಮಾದಿಗ, ಮಾವಿಗ ಸೇರಿದಂತೆ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಅದು ಮರಣಶಾಸನವಾಗಲಿದೆ ಎಂದು ಆರೋಪಿಸಲಾಗಿದೆ.


ಪರಿಶಿಷ್ಟ ಜಾತಿಗಳ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಕಲ್ಪಿಸುವಂತೆ ಸುಪ್ರೀಂಕೋರ್ಟ್ನ 7 ನ್ಯಾಯಾಧೀಶರ ಪೀಠವು ಆದೇಶ ನೀಡಿ ಎರಡು ವರ್ಷಗಳಾಗಿವೆ. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯ ಆಯೋಗದ ವರದಿಯನ್ನು ಸಚಿವ ಸಂಪುಟ ಅನುಮೋದಿಸಿತು. ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕಾರವಾಗಿ ರಾಜ್ಯಪಾಲರ ಅಂಕಿತ ಪಡೆದು ವಿಧೇಯಕ ಜಾರಿಯಲ್ಲಿದೆ. ಆದರೆ ಇದೆಲ್ಲವನ್ನೂ ಬದಿಗೊತ್ತಿ ಒಳಮೀಸಲಾತಿ ಅಳವಡಿಸದೆ ನೇಮಕಾತಿ ಸುತ್ತೋಲೆ ಹೊರಡಿಸಿರುವುದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಮಾಡಿದ ಮಹಾದ್ರೋಹ ಹಾಗೂ ಘೋರ ಅನ್ಯಾಯ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.


ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಇದೀಗ ಉದ್ಯೋಗ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸಲು ತಾಂತ್ರಿಕ ಅಡಚಣೆ ಅಥವಾ ಕಾನೂನು ತೊಡಕಿದೆ ಎಂಬ ಕುಂಟುನೆಪ ಹೇಳುವುದು ಮೋಸ ಮತ್ತು ಕುತಂತ್ರ ಎಂದು ಸಂಘಟನೆ ಆರೋಪಿಸಿದೆ.


“ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ.15ರಲ್ಲಿ ಒಳಮೀಸಲಾತಿ ಅಳವಡಿಸಲು ಯಾವ ನ್ಯಾಯಾಲಯದ ತಡೆಯಾಜ್ಞೆಯಾಗಲೀ, ತಾಂತ್ರಿಕ ಅಡಚಣೆಯಾಗಲೀ ಇಲ್ಲ. ಆದರೂ ಸರ್ಕಾರ ಜಗ್ಗಿಲ್ಲ. ಹಾಗಾಗಿ 56,432 ಹುದ್ದೆಗಳು ನಮ್ಮ ಸಮುದಾಯದ ಹಕ್ಕುಗಳಿಂದ ಕೈತಪ್ಪುವ ಗಂಭೀರ ಸಂಭವವಿದೆ. ಮುಖ್ಯಮಂತ್ರಿಗಳು ಇದುವರೆಗೂ ಯಾವುದೇ ಸ್ಪಷ್ಟ ಮತ್ತು ಬಲವಾದ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ” ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.


ಚಿಕ್ಕಬಳ್ಳಾಪುರದಲ್ಲಿ ಕರಪತ್ರ ಬಿಡುಗಡೆ ಸಂದರ್ಭದಲ್ಲಿ ಮುಖಂಡರು ಮಾತನಾಡಿ, “ಮಾರ್ಚ್ 25ರ ಪ್ರತಿಭಟನೆ ಕೇವಲ ಸಂಘಟನೆಗಳ ಪ್ರತಿಭಟನೆಯಲ್ಲ, ಇದು ಸಂಪೂರ್ಣ ಸಮುದಾಯದ ಹೋರಾಟ. ಪ್ರತಿಯೊಬ್ಬ ಮಾದಿಗ, ಮಾವಿಗ, ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ತಮ್ಮ ಹಕ್ಕಿಗಾಗಿ ಬೀದಿಗಿಳಿಯಬೇಕು. ಈ ಹೋರಾಟದಲ್ಲಿ ಯಶಸ್ಸು ಸಿಗುವವರೆಗೆ ಹಿಂದೆ ಸರಿಯುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.


ಪ್ರತಿಭಟನೆಯ ಪ್ರಮುಖ ಹಕ್ಕೊತ್ತಾಯಗಳು:


· 56,432 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 27-02-2026ರಂದು ಹೊರಡಿಸಲಾದ ಸುತ್ತೋಲೆಯನ್ನು ಹಿಂಪಡೆಯಬೇಕು.

· ಪರಿಶಿಷ್ಟ ಜಾತಿಯ ಶೇ.15ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಿ ನೇಮಕಾತಿ ನಡೆಸಬೇಕು.

· ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನವನ್ನು ಕೈಬಿಡಬೇಕು.

· ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.

· ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ವರ್ಗಕ್ಕೆ ಶೇ.7 ರಂತೆ ಒಟ್ಟು ಶೇ.50 ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು.


ಎಲ್ಲಾ ಒಳಮೀಸಲಾತಿ ಹೋರಾಟಗಾರರು ಹಾಗೂ ಸಮಾನಮನಸ್ಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕಿಗಾಗಿ ಹೋರಾಡಬೇಕೆಂದು ಮಾದಿಗ ಸಂಘಟನೆಗಳ ಒಕ್ಕೂಟವು ಮನವಿ ಮಾಡಿಕೊಂಡಿದೆ.

Post a Comment

Previous Post Next Post