Top News

ಸಿನಿಮಾ ಪೈರಸಿಗೆ ಬ್ರೇಕ್: ಹೊಸ ತಿದ್ದುಪಡಿ ಕಾಯ್ದೆ ಜಾರಿ; 3 ವರ್ಷ ಜೈಲು, ಪ್ರೊಡಕ್ಷನ್ ವೆಚ್ಚದ ಶೇ.5 ದಂಡ

ನವದೆಹಲಿ: ಚಿತ್ರ ಕಳ್ಳತನ (ಪೈರಸಿ) ತಡೆಗಟ್ಟಲು ಕೇಂದ್ರ ಸರ್ಕಾರ ತಂದಿರುವ ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ, 2023 ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ. ಅಕ್ರಮವಾಗಿ ಚಿತ್ರೀಕರಣ ಮತ್ತು ಪ್ರಸಾರ ಮಾಡುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ಈ ಕಾಯ್ದೆ ಅವಕಾಶ ಕಲ್ಪಿಸಿದೆ. ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 6AA ಮತ್ತು 6AB ಅಡಿಯಲ್ಲಿ ಚಲನಚಿತ್ರಗಳ ಅನಧಿಕೃತ ರೆಕಾರ್ಡಿಂಗ್ ಮತ್ತು ಪ್ರಸಾರವನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದವರಿಗೆ ಸೆಕ್ಷನ್ 7(1ಎ) ಅಡಿಯಲ್ಲಿ ಕನಿಷ್ಠ 3 ತಿಂಗಳು ಜೈಲು ಶಿಕ್ಷೆ ಮತ್ತು ರೂ. 3 ಲಕ್ಷ ದಂಡ ವಿಧಿಸಲಾಗುವುದು. ಅಪರಾಧದ ತೀವ್ರತೆಯನ್ನು ಅವಲಂಬಿಸಿ ಈ ಶಿಕ್ಷೆಯನ್ನು ಗರಿಷ್ಠ 3 ವರ್ಷಗಳವರೆಗೆ ವಿಸ್ತರಿಸಬಹುದಾಗಿದ್ದು, ದಂಡವು ಚಿತ್ರದ ಒಟ್ಟು ನಿರ್ಮಾಣ ವೆಚ್ಚದ ಶೇ.5 ರಷ್ಟಿರಲಿದೆ. ಹಾಗೆಯೇ, ಸೆಕ್ಷನ್ 7(1ಬಿ)(ii) ಅಡಿಯಲ್ಲಿ ಪೈರಸಿ ವಿಷಯಗಳನ್ನು ಹೋಸ್ಟ್ ಮಾಡಿರುವ ಮಧ್ಯವರ್ತಿಗಳ (intermediaries) ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವೆಂಬರ್ 3, 2023ರ ಸಾರ್ವಜನಿಕ ಸೂಚನೆಯ ಮೂಲಕ ದೂರು ಸ್ವೀಕರಿಸಲು ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಚಲನಚಿತ್ರಗಳ ಮೂಲ ಹಕ್ಕುಸ್ವಾಮ್ಯದಾರರು, ಅವರಿಂದ ಅಧಿಕಾರ ಪಡೆದವರು ಅಥವಾ ಯಾವುದೇ ವ್ಯಕ್ತಿಯು ಇಂಟರ್ನೆಟ್ನಲ್ಲಿ ಪೈರಸಿ ಆವೃತ್ತಿಗಳ ಪ್ರದರ್ಶನ ಕುರಿತು ನಿಗದಿತ ನಮೂನೆಯಲ್ಲಿ ದೂರು ಸಲ್ಲಿಸಬಹುದು. ದೂರು ಸ್ವೀಕರಿಸಿದ ತಕ್ಷಣ, ಸಂಬಂಧಪಟ್ಟ ಲಿಂಕ್ಗಳನ್ನು ತೆಗೆದುಹಾಕಲು ಮಧ್ಯವರ್ತಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಇನ್ಫಾರ್ಮೇಷನ್ ಟೆಕ್ನಾಲಜಿ ಕಾಯ್ದೆ, 2000ರ ಸೆಕ್ಷನ್ 79(3)(ಬಿ) ಅಡಿಯಲ್ಲಿ ಅನಧಿಕೃತ ಅಥವಾ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಹಲು/ಪ್ರವೇಶ ನಿರಾಕರಿಸಲು ಮಧ್ಯವರ್ತಿಗಳು ಬದ್ಧರಾಗಿರುತ್ತಾರೆ. ನ್ಯಾಯಾಲಯದ ಆದೇ� ಅಥವಾ ಸರ್ಕಾರದ ಅಧಿಸೂಚನೆಯ ಮೂಲಕ ಈ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಈ ಕಾನೂನಿನಿಂದ ಚಿತ್ರರಂಗಕ್ಕೆ ರಕ್ಷಣೆ ಸಿಕ್ಕಂತಾಗಿದ್ದು, ಪೈರಸಿ ತಡೆಗಟ್ಟಲು ಪರಿಣಾಮಕಾರಿ ಕ್ರಮಗಳಾಗಲಿವೆ ಎಂದು ಉದ್ಯಮದವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸೇರಿದಂತೆ ಎಲ್ಲ ಭಾಷೆಯ ಚಿತ್ರಗಳ ಪೈರಸಿ ತಡೆಗೆ ಈ ಕಾಯ್ದೆ ಸಹಕಾರಿಯಾಗಲಿದೆ.

Post a Comment

Previous Post Next Post