Top News

ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ: ನ್ಯಾಯಕ್ಕಾಗಿ ದಕ್ಷಿಣ ಕನ್ನಡದಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ


 


ಮಂಗಳೂರು, ಮಾರ್ಚ್ 23: ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದ ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆಯಾಗಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರು, ವಿನಾಯಕ ಬಾಳಿಗಾ ಕೊಲೆ ಮಾಡಿದವರನ್ನು ಸಂಘಪರಿವಾರ ವ್ಯವಸ್ಥಿತವಾಗಿ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.


ಕರಾವಳಿಯ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದ್ದ ಬಾಳಿಗಾ ಅವರ ಕೊಲೆ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ ಎಂದು ಅವರು ತೀವ್ರ ಟೀಕೆ ಮಾಡಿದರು. “ಬಾಳಿಗಾ ಮಾಡಿದ ತಪ್ಪೇನು? ಹಿಂದುತ್ವಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸಿದ್ದೇ ತಪ್ಪಾ? ಕರಾವಳಿಯ ಬಿಜೆಪಿಯ ನಾಯಕರು ಉತ್ತರಿಸಲಿ” ಎಂದು ಹರಿಪ್ರಸಾದ್ ಪ್ರಶ್ನಿಸಿದರು.


ವಿನಾಯಕ ಬಾಳಿಗಾ ಕುಟುಂಬದವರು ಇಂದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ನ್ಯಾಯದ ಕೂಗಿಗೆ ಕರಾವಳಿಯ ಪ್ರಜ್ಞಾವಂತ ಜನರು ನಿಂತಿದ್ದಾರೆ. ನಾನು ಕೂಡ ಈ ಹೋರಾಟದ ಜೊತೆಯಾಗುತ್ತೇನೆ ಎಂದು ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದರು.


ಬಹಿರಂಗ ಸಭೆಯಲ್ಲಿ ಮಂಗಳೂರಿನ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಪ್ರೊ. ನರೇಂದ್ರ ನಾಯಕ್, ಮುನೀರ್ ಕಾಟಿಪಳ್ಳ, ಎಂ.ಜಿ. ಹೆಗಡೆ, ಮಂಜುಳಾ ನಾಯಕ್ ಸೇರಿದಂತೆ ವಿನಾಯಕ ಬಾಳಿಗಾ ಅವರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.


ದಕ್ಷಿಣ ಕನ್ನಡದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಸಂಕೇತವಾಗಿ ಉಳಿದಿರುವ ವಿನಾಯಕ ಬಾಳಿಗಾ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಕೊಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನಿಖೆಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಯಿತು.



Post a Comment

Previous Post Next Post