ಬೆಂಗಳೂರು, ಮಾರ್ಚ್ 23: ಯಲಹಂಕ ವಿಧಾನಸಭಾ ಕ್ಷೇತ್ರದ ಹೆಸರಘಟ್ಟ ಗ್ರಾಮದ ಪ್ರಮುಖರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಎಸ್) ಹಿರಿಯ ಮುಖಂಡರಾದ ಮುತ್ತಣ್ಣ ಮತ್ತು ರೇಣುಕಾ ಪ್ರಸಾದ್ ಅವರ ಮನೆಗೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ, ಮುತ್ತಣ್ಣ ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡರು. ಕ್ಷೇತ್ರದಲ್ಲಿ ಸಂಘಟನೆಗೆ ಭದ್ರ ಬುನಾದಿ ಹಾಕಿದ ಗೌರವಾನ್ವಿತ ಹಿರಿಯರ ಅನುಭವ, ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆಯುವ ಅವಕಾಶ ದೊರಕಿದ್ದು ಸಂತಸ ತಂದಿದೆ ಎಂದು ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಧಾಕರ್ ಅವರು, “ಅವರ ಅಮೂಲ್ಯ ಅನುಭವವನ್ನು ಎರವಲು ಪಡೆಯುವ ಸದವಕಾಶ ಸಿಕ್ಕಿದ್ದು ನಿಜಕ್ಕೂ ಪ್ರೇರಣಾದಾಯಕ ಮತ್ತು ಅರ್ಥಪೂರ್ಣ ಕ್ಷಣವಾಗಿತ್ತು. ಹಿರಿಯರ ಮಾರ್ಗದರ್ಶನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲು ಸಾಧ್ಯವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಹೆಸರಘಟ್ಟ ಗ್ರಾಮದಲ್ಲಿ ನಡೆದ ಈ ಭೇಟಿಯು ಸ್ಥಳೀಯ ಮುಖಂಡರು ಹಾಗೂ ಸಂಘದ ಕಾರ್ಯಕರ್ತರ ಸಂಗಮವಾಗಿ ಮಾರ್ಪಟ್ಟಿತು. ಕ್ಷೇತ್ರದ ಸಂಘಟನಾತ್ಮಕ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಲು ಹಿರಿಯರ ನಿರಂತರ ಸಹಕಾರವನ್ನು ಸಂಸದರು ಕೋರಿದರು.

Post a Comment