Top News

ವರ್ಗಾವಣೆ ದಂಧೆ ಬಗ್ಗೆ ಹೈಕೋರ್ಟ್ ತೀಕ್ಷ್ಣ ವೀಕ್ಷಣೆ; ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ


 

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ತಾಂಡವವಾಡುತ್ತಿರುವ ಬಗ್ಗೆ ಹೈಕೋರ್ಟ್ ತೀಕ್ಷ್ಣ ವೀಕ್ಷಣೆ ವ್ಯಕ್ತಪಡಿಸಿರುವ ಬೆನ್ನಲ್ಲೇ, ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್ ಅವರು, ಒಂದು ಕಡೆ ಸಂಪೂರ್ಣವಾಗಿ ದಿವಾಳಿ ಆಗಿರುವ ಖಜಾನೆ, ಮತ್ತೊಂದು ಕಡೆ ಸದಾ ಅಲುಗಾಡುತ್ತಿರುವ ಕುರ್ಚಿ, ಇವೆರಡರ ಮಧ್ಯೆ ಸಿಲುಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರ್ಬಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.


" 'ಹಲೋ ಅಪ್ಪ' ಖ್ಯಾತಿಯ ಮುಖ್ಯಮಂತ್ರಿ @siddaramaiah ನವರು, ವರ್ಗಾವಣೆ ದಂಧೆಯನ್ನೇ ಮುಖ್ಯ ಕಾಯಕ ಮಾಡಿಕೊಂಡಿದ್ದಾರೆ. ಇದನ್ನ ಗಮನಿಸಿರುವ ಮಾನ್ಯ ಹೈಕೋರ್ಟ್, ಮುಖ್ಯಮಂತ್ರಿಗಳಾದವರಿಗೆ ಸರ್ಕಾರಿ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ ಎಂದು ಚಾಟಿ ಬೀಸಿರುವುದು ರಾಜ್ಯದಲ್ಲಿ ದುರಾಡಳಿತ, ವರ್ಗಾವಣೆ ದಂಧೆ ಎಷ್ಟು ತಾಂಡವವಾಡುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ" ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.


ಇದಲ್ಲದೆ, ಈ ನಾಲಾಯಕ್ @INCKarnataka ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆರ್. ಅಶೋಕ್ ಪಟ್ಟು ಹಿಡಿದಿದ್ದಾರೆ.


ವರ್ಗಾವಣೆ ಅಧಿಕಾರದ ವಿಚಾರದಲ್ಲಿ ಹೈಕೋರ್ಟ್ ಏನು ಹೇಳಿದೆ?

ಇತ್ತೀಚೆಗೆ ರಾಜ್ಯ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಮುಖ್ಯಮಂತ್ರಿಗಳು ವರ್ಗಾವಣೆಗಿಂತ ಹೆಚ್ಚಾಗಿ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಯೋಜನೆಗಳತ್ತ ಗಮನ ಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಅವರು ತಮ್ಮ ಟೀಕೆಯನ್ನು ಮುಂದುವರೆಸಿದ್ದಾರೆ.


ಸರ್ಕಾರದ ಈ ಕ್ರಮಗಳ ವಿರುದ್ಧ ವಿಪಕ್ಷಗಳು ಸದನದ ಹೊರಗೂ ಒಳಗೂ ಪ್ರತಿಭಟನೆ ಮುಂದುವರೆಸುವ ಸಾಧ್ಯತೆಗಳಿವೆ. ಆದರೆ, ಸರ್ಕಾರದ ಪರವಾಗಿ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Post a Comment

Previous Post Next Post