ಮೈಸೂರು, ಮಾರ್ಚ್ 23: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ‘ಮಹಿಳಾ ಜನ ಸುನ್ವಾಯಿ (ಮನೆ ಮನೆಗೆ ಮಹಿಳಾ ಆಯೋಗ)’ ಕಾರ್ಯಕ್ರಮವು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನೂರಾರು ಮಹಿಳೆಯರು ತಮ್ಮ ಸಮಸ್ಯೆಗಳನ್ನು, ಅಳಲುಗಳನ್ನು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು ಕೌಟುಂಬಿಕ ಸಮಸ್ಯೆಗಳು, ಆಸ್ತಿ ವಿವಾದಗಳು, ದೌರ್ಜನ್ಯ ಪ್ರಕರಣಗಳು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆಯೋಗದ ಮುಂದಿಟ್ಟರು. ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಪ್ರತಿಯೊಬ್ಬರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಿದರು.
ಸಮಸ್ಯೆಗಳ ಗಂಭೀರತೆಯನ್ನು ಗಮನಿಸಿದ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು. ನ್ಯಾಯೋಚಿತ ಪರಿಹಾರ ದೊರೆಯುವವರೆಗೂ ಅವರು ಆಯೋಗದ ವತಿಯಿಂದ ನಿರಂತರ ಮೇಲ್ವಿಚಾರಣೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಆಯೋಗದ ಅಧ್ಯಕ್ಷೆಯವರು ಮಾತನಾಡಿ, "ಮಹಿಳೆಯರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು ನಮ್ಮ ಆದ್ಯತೆಯಾಗಿದೆ. ಮನೆ ಮನೆಗೆ ತೆರಳಿ ಮಹಿಳೆಯರ ಸಮಸ್ಯೆಗಳನ್ನು ಆಲಿಸುವ ಈ ಕಾರ್ಯಕ್ರಮವು ಸರ್ಕಾರದ ಜನಪರ ಕ್ರಮವಾಗಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಆಯೋಗದ ಮೇಲ್ವಿಚಾರಣೆ ಮುಂದುವರಿಯಲಿದೆ" ಎಂದರು.

Post a Comment