ಕೋಲಾರ: ಜೀವನದಲ್ಲಿ ದೊಡ್ಡ ದುರಂತವೊಂದನ್ನು ಎದುರಿಸಿಯೂ ಸೋಲನ್ನೇ ಸವಾಲಾಗಿ ಸ್ವೀಕರಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಸಾಹಸಿ ವಿದ್ಯಾರ್ಥಿನಿ ಕುಸುಮಾ ಅವರನ್ನು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ಚಿನ್ನಿಗಾನಹಳ್ಳಿಯಲ್ಲಿ ಭೇಟಿ ಮಾಡಿ, ಅವರ ಛಲಕ್ಕೆ ಗೌರವ ಸಲ್ಲಿಸಿದರು.
ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ ಶಿಕ್ಷಣವನ್ನು ನಿಲ್ಲಿಸದೆ, ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಕುಸುಮಾ ಅವರ ಸಾಹಸದ ಕಥೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಕುಸುಮಾ ಅವರನ್ನು ನೇರವಾಗಿ ಭೇಟಿ ಮಾಡಿ ಅವರ ಸ್ಥಿತಿಯನ್ನು ಪರಿಶೀಲಿಸಿದರು.
ದುರಂತದ ಕಥೆ:
ಕುಸುಮಾ ಅವರು ಶಾಲೆಗೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಅವರ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಐದು ಆಸ್ಪತ್ರೆಗಳಿಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಗದೇ ಹೋದ ಪರಿಣಾಮ, ಮಂಡಿಯ ಮೇಲ್ಭಾಗದವರೆಗೆ ಅವರ ಒಂದು ಕಾಲನ್ನು ತೆಗೆಯಬೇಕಾದ ದುರದೃಷ್ಟ ಸಂಭವಿಸಿತು. ಆದರೆ ಈ ದುರಂತವೂ ಕುಸುಮಾ ಅವರ ಛಲವನ್ನು ಕುಂದಿಸಲಿಲ್ಲ.
ಈ ವರ್ಷವೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದೇ ತೀರುತ್ತೇನೆ ಎಂದು ನಿರ್ಧರಿಸಿದ ಅವರು, ಮೊನ್ನೆ ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮೊದಲ ಪತ್ರಿಕೆಗೆ ಉತ್ತರ ಬರೆದಿದ್ದಾರೆ.
ಸುರೇಶ್ ಕುಮಾರ್ ಭೇಟಿ:
ಕುಸುಮಾ ಅವರನ್ನು ಭೇಟಿಯಾದ ಸುರೇಶ್ ಕುಮಾರ್ ಅವರು, "ಧೈರ್ಯ, ಛಾತಿ, ಸವಾಲನ್ನು ಎದುರಿಸುವ ಛಲ - ಈ ಮೂರೂ ಗುಣಗಳನ್ನು ಇಂದು ಈ ಬಾಲಕಿಯಲ್ಲಿ ಕಂಡೆ. ಆಕೆಯನ್ನು ಕಂಡಾಗ ನನ್ನ ಕಣ್ಣಲ್ಲಿ ನೀರು ತುಂಬಿತು, ಜೊತೆಗೆ ಹೆಮ್ಮೆಯೂ ಉಕ್ಕಿ ಬಂದಿತು" ಎಂದು ಭಾವುಕರಾಗಿ ತಿಳಿಸಿದರು.
ಕುಸುಮಾ ಅವರೊಂದಿಗೆ ಮಾತನಾಡಿದಾಗ, "ನಾನು ಐಪಿಎಸ್ ಅಧಿಕಾರಿಯಾಗಬೇಕೆಂದಿದ್ದೇನೆ" ಎಂದು ಅವರು ಹೇಳಿದಾಗ ಅವರ ಆತ್ಮವಿಶ್ವಾಸ ಎದ್ದು ಕಂಡಿತು ಎಂದು ಸುರೇಶ್ ಕುಮಾರ್ ನೆನಪಿಸಿಕೊಂಡರು.
ಕೃತಕ ಕಾಲು ಜೋಡಣೆಗೆ ಭರವಸೆ:
ಸುರೇಶ್ ಕುಮಾರ್ ಅವರು ಕುಸುಮಾ ಅವರಿಗೆ ಕೃತಕ ಕಾಲು ಜೋಡಿಸಿಕೊಟ್ಟು ಸ್ವಾವಲಂಬಿಯಾಗಿ ಓಡಾಡುವಂತೆ ವ್ಯವಸ್ಥೆ ಮಾಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಅಲ್ಲದೆ, ಆ ಬಾಲಕಿಯ ಛಲಕ್ಕೆ ತಮ್ಮ ಗೌರವ ಸೂಚಕವಾಗಿ ಶಾಲು ಹೊದಿಸಿ ಶುಭ ಕೋರಿದರು.
ಶಿಕ್ಷಕರ ಪಾತ್ರ ಮಹತ್ವದ್ದು:
ಕುಸುಮಾ ಅವರ ಛಲ ಈಡೇರುವಂತೆ ಮಾಡಿದ ಅವರ ತಂದೆ ಶಂಕರಪ್ಪ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ರೀತಿಯ ಸಹಕಾರ ನೀಡಿದ ತಾಲೂಕು ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಅವರನ್ನು ಸುರೇಶ್ ಕುಮಾರ್ ಅಭಿನಂದಿಸಿದರು.
ಕುಸುಮಾ ಅವರು ಓದುತ್ತಿರುವ ಸೆಂಟ್ ಮೇರಿಸ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಪ್ರತಿ ಪರೀಕ್ಷೆಯಲ್ಲೂ ಅವರು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಾ ಬಂದಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು. ಶಿಕ್ಷಕರು ಅವರಿಗೆ ನೀಡಿರುವ ಅಕ್ಕರೆ, ವಿಶೇಷ ಶಿಕ್ಷಣ ಮತ್ತು ಎಲ್ಲಾ ರೀತಿಯ ಸಹಕಾರ ಅತ್ಯಂತ ಗಮನಾರ್ಹ ಎಂದು ಸುರೇಶ್ ಕುಮಾರ್ ಶ್ಲಾಘಿಸಿದರು.
ಬಚೇಂದ್ರಿ ಪಾಲ್ ನೆನಪು:
ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು, "ಕಾಲು ಕಳೆದುಕೊಂಡರೂ ಎವರೆಸ್ಟ್ ಶಿಖರವನ್ನು ಹತ್ತಿ ತುದಿ ಮುಟ್ಟಿದ ಸಾಹಸಿ ಬಚೇಂದ್ರಿ ಪಾಲ್ ಅವರು ನನಗೆ ನೆನಪಾದರು. ಕುಸುಮಾ ಕೂಡ ಅಂತಹ ಸಾಹಸಿಯಾಗಿ ಬೆಳೆಯಲಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ನಾನು ಅದೆಷ್ಟೋ ಸಾಹಸಿ ಬಾಲಕ-ಬಾಲಕಿಯರನ್ನು ಭೇಟಿ ಮಾಡಿದ್ದೇನೆ. ಆದರೆ ಕುಸುಮಾಳ ಸಾಧನೆ ನನ್ನ ಕಣ್ತೆರೆಸಿತು ಎಂದು ಮಾಜಿ ಸಚಿವರು ಭಾವುಕತೆಯಿಂದ ತಿಳಿಸಿದರು.
ಕುಸುಮಾ ಅವರ ಈ ಸಾಹಸಕ್ಕೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಭವಿಷ್ಯದ ಕನಸು ಈಡೇರಲು ಶುಭ ಹಾರೈಸಲಾಗುತ್ತಿದೆ.

Post a Comment