Top News

ಚಿಕ್ಕಬಳ್ಳಾಪುರ: ಶ್ವಾನದಳದ ‘ಜಿಮ್ಮಿ’ ಸಾಹಸ; ಕಳುವಾದ ಚೈನ್ ವಾಸನೆಯಿಂದ ಆರೋಪಿಯ ಮನೆ ಪತ್ತೆ– ಹ್ಯಾಂಡ್ಲರ್ಗೆ ಎಸ್ಪಿ ಪ್ರಶಂಸಾಪತ್ರ


 ಚಿಕ್ಕಬಳ್ಳಾಪುರ, ಮಾರ್ಚ್ 23: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ. 62/2026, ಕಲಂ 309(6) ಬಿಎನ್ಎಸ್ ಪ್ರಕರಣದ ಸುಳಿವು ಪತ್ತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ವಾನದಳದ ‘ಜಿಮ್ಮಿ’ ಎಂಬ ಶ್ವಾನವನ್ನು ಬಳಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶ್ವಾನ ಹಾಗೂ ಅದರ ಹ್ಯಾಂಡ್ಲರ್ ಸಹಕಾರದಿಂದ ಆರೋಪಿಯನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಕ್ಕಾಗಿ ಹ್ಯಾಂಡ್ಲರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಶಂಸಾಪತ್ರ ನೀಡಿ ಗೌರವಿಸಿದರು.


ಪ್ರಕರಣದ ವಿವರದ ಪ್ರಕಾರ, ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧಕ್ಕೆ ಸಂಬಂಧಿಸಿದಂತೆ ಸುಳಿವು ಸಂಗ್ರಹಿಸಲು ಶ್ವಾನದಳವನ್ನು ಕರೆಸಲಾಗಿತ್ತು. ಹ್ಯಾಂಡ್ಲರ್ ಶ್ರೀ ಅರವಿಂದ್ ಬಿ.ಎಚ್. (ಎ.ಪಿ.ಸಿ 198 ಡಿ.ಎ.ಆರ್, ಚಿಕ್ಕಬಳ್ಳಾಪುರ) ಅವರು ಘಟನಾ ಸ್ಥಳದಲ್ಲಿ ಕಳುವಾಗಿದ್ದ ಚೈನನ್ನು ಶ್ವಾನಕ್ಕೆ ವಾಸನೆಗಾಗಿ ನೀಡಿದರು. ಶ್ವಾನ ‘ಜಿಮ್ಮಿ’ ವಾಸನೆಯನ್ನು ಗ್ರಹಿಸಿ ನೇರವಾಗಿ ಆರೋಪಿತನ ಮನೆಯವರೆಗೆ ತೆರಳಿ ಆರೋಪಿತನನ್ನು ಗುರುತಿಸಿತು. ಈ ಮೂಲಕ ಆರೋಪಿಯನ್ನು ದಸ್ತಗಿರಿ ಮಾಡಲು ಹಾಗೂ ಅವರಿಂದ ಕಳುವಾಗಿದ್ದ ಮಾಲನ್ನು ವಶಪಡಿಸಿಕೊಳ್ಳಲು ಸಹಕಾರಿಯಾಯಿತು.


ಶ್ವಾನ ಮತ್ತು ಹ್ಯಾಂಡ್ಲರ್ ನಿರ್ವಹಿಸಿದ ಅತ್ಯುತ್ತಮ ಕಾರ್ಯವೈಖರಿಯನ್ನು ಮೆಚ್ಚಿದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಹ್ಯಾಂಡ್ಲರ್ ಶ್ರೀ ಅರವಿಂದ್ ಅವರಿಗೆ ಪ್ರಶಂಸಾಪತ್ರವನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


ಪೊಲೀಸ್ ಇಲಾಖೆಯ ಶ್ವಾನದಳದ ಸಹಾಯದಿಂದ ಪ್ರಕರಣ ಬೇಧಿಸುವಲ್ಲಿ ಈ ಕಾರ್ಯ ಮಾದರಿಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Post a Comment

Previous Post Next Post