Top News

ಕಲಘಟಗಿ ತಂಬೂರು ಕ್ರಾಸ್ ಬಳಿ ಎಲ್ಪಿಜಿ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆ: ಸಮಯಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದ್ದು; ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿಗೆ ಸಚಿವ ಸಂತೋಷ್ ಲಾಡ್ ಕೃತಜ್ಞತೆ



 ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ, ಸುರಕ್ಷಿತವಾಗಿ ಗ್ಯಾಸ್ ವರ್ಗಾವಣೆ


ಕಲಘಟಗಿ (ಧಾರವಾಡ ಜಿಲ್ಲೆ), ಮಾರ್ಚ್ 21: ಕಲಘಟಗಿ ತಾಲ್ಲೂಕಿನ ತಂಬೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಪಿಜಿ ತುಂಬಿಕೊಂಡು ಬರುತ್ತಿದ್ದ ವಾಹನದಿಂದ ಅಪಾರ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಸಂಭವಿಸಲಿದ್ದ ಭಾರಿ ಅವಘಡವು ಸ್ವಲ್ಪದರಲ್ಲೇ ತಪ್ಪಿದೆ. ಸ್ಥಳೀಯರ ಎಚ್ಚರಿಕೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ದುರಂತ ತಪ್ಪಿಸಲಾಗಿದೆ.


ಸೋರಿಕೆ ಸಂಭವಿಸಿದ ತಕ್ಷಣ ಸ್ಥಳೀಯರು ಗ್ಯಾಸ್ ಸೋರಿಕೆಯನ್ನು ಗಮನಿಸಿ ಚಾಲಕನಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಲಘಟಗಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ವಾಹನ ಸಂಚಾರ ಹಾಗೂ ಜನಸಂಚಾರವನ್ನು ನಿಷೇಧಿಸಿದರು. ಇದರಿಂದಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲಾಯಿತು.


ನಂತರ ಗ್ಯಾಸ್ ಟ್ಯಾಂಕರ್ನಿಂದ ಮತ್ತೊಂದು ವಾಹನಕ್ಕೆ ಸುರಕ್ಷಿತವಾಗಿ ಸಂಪೂರ್ಣ ಗ್ಯಾಸ್ ವರ್ಗಾಯಿಸಲಾಯಿತು. ಸುಮಾರು ಹಲವಾರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಶ್ರಮಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದರು.


ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್ ಅವರು, “ತಮ್ಮ ಸಮಯಪ್ರಜ್ಞೆಯಿಂದ ಸಂಭವನೀಯ ದುರಂತವನ್ನು ತಪ್ಪಿಸಿದ ಕಲಘಟಗಿ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಗ್ಯಾಸ್ ಸೋರಿಕೆಯನ್ನು ಗಮನಿಸಿ ಚಾಲಕನಿಗೆ ಮಾಹಿತಿ ನೀಡಿದ ಸ್ಥಳೀಯರಿಗೆ ನನ್ನ ಕೃತಜ್ಞತೆಗಳು” ಎಂದು ತಿಳಿಸಿದರು.


ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಲ್ಪ ಸಮಯ ವಾಹನ ಸಂಚಾರ ಸ್ಥಗಿತಗೊಂಡಿದ್ದು, ನಂತರ ಸಾಮಾನ್ಯ ಸ್ಥಿತಿಗೆ ಮರಳಿತು.

Post a Comment

Previous Post Next Post