Top News

ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳು: ಪಿಂಚಣಿ, ವೈದ್ಯಕೀಯ ಸಹಾಯ, ಶಿಕ್ಷಣ ನೆರವು ಸೇರಿದಂತೆ ಹಲವು ಸೌಲಭ್ಯಗಳು

ಬೆಂಗಳೂರು:
ರಾಜ್ಯದಲ್ಲಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ Karnataka Building and Other Construction Workers Welfare Board ವಿವಿಧ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಮೂಲಕ ಕಾರ್ಮಿಕರು ಹಾಗೂ ಅವರ ಅವಲಂಭಿತರಿಗೆ ಪಿಂಚಣಿ, ವೈದ್ಯಕೀಯ ಸಹಾಯ, ಶಿಕ್ಷಣ ನೆರವು, ಮದುವೆ ಸಹಾಯಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳು

ಮಂಡಳಿಯ ಸದಸ್ಯತ್ವವನ್ನು ಕನಿಷ್ಠ ಮೂರು ವರ್ಷಗಳ ಕಾಲ ಹೊಂದಿದ್ದು 60 ವರ್ಷ ಪೂರೈಸಿದ ಕಾರ್ಮಿಕರಿಗೆ ಪ್ರತಿ ತಿಂಗಳು ₹3,000 ಪಿಂಚಣಿ ನೀಡಲಾಗುತ್ತದೆ. ಪಿಂಚಣಿದಾರರು ಮೃತಪಟ್ಟಲ್ಲಿ ಅವರ ಪತಿ ಅಥವಾ ಪತ್ನಿಗೆ ₹1,500 ಕುಟುಂಬ ಪಿಂಚಣಿ ನೀಡಲಾಗುತ್ತದೆ.


ನೋಂದಾಯಿತ ಕಾರ್ಮಿಕರು ಕಾಯಿಲೆ ಅಥವಾ ಕೆಲಸದ ಸ್ಥಳದ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾದಲ್ಲಿ ಮಾಸಿಕ ₹2,000 ದುರ್ಬಲತೆ ಪಿಂಚಣಿ ಹಾಗೂ ದುರ್ಬಲತೆಯ ಪ್ರಮಾಣದ ಆಧಾರದ ಮೇಲೆ ಗರಿಷ್ಠ ₹2 ಲಕ್ಷ ಅನುಗ್ರಹಧನ ನೀಡಲಾಗುತ್ತದೆ.


ವೈದ್ಯಕೀಯ ಮತ್ತು ಆರೋಗ್ಯ ಸಹಾಯ


ಕಾರ್ಮಿಕರು ಹಾಗೂ ಅವರ ಅವಲಂಭಿತರಿಗೆ ವಿವಿಧ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸಾಮಾನ್ಯ ಚಿಕಿತ್ಸೆಗೆ ₹300 ರಿಂದ ₹20,000 ವರೆಗೆ ವೈದ್ಯಕೀಯ ಸಹಾಯಧನ ನೀಡಲಾಗುತ್ತದೆ. ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳು, ಮೆದುಳು ರಕ್ತಸ್ರಾವ, ಮೂಳೆ ಶಸ್ತ್ರಚಿಕಿತ್ಸೆ ಸೇರಿದಂತೆ ಪ್ರಮುಖ ಚಿಕಿತ್ಸೆಗಳಿಗಾಗಿ ಗರಿಷ್ಠ ₹2 ಲಕ್ಷವರೆಗೆ ಸಹಾಯಧನ ನೀಡಲಾಗುತ್ತದೆ.


ಇದರ ಜೊತೆಗೆ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಮತ್ತು ಪ್ರೀವೆಂಟಿವ್ ಹೆಲ್ತ್ ಕೇರ್ ಯೋಜನೆಗಳ ಮೂಲಕ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಔಷಧೋಪಚಾರಗಳನ್ನು ಕಾರ್ಮಿಕರಿಗೆ ಒದಗಿಸಲಾಗುತ್ತಿದೆ.
 

ಅಪಘಾತ ಪರಿಹಾರ


ನೋಂದಾಯಿತ ಕಟ್ಟಡ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡಲಾಗುತ್ತದೆ. ಸಂಪೂರ್ಣ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ₹2 ಲಕ್ಷವರೆಗೆ ಪರಿಹಾರ ನೀಡಲಾಗುತ್ತದೆ.


ಹೆರಿಗೆ, ಮದುವೆ ಮತ್ತು ಅಂತ್ಯಕ್ರಿಯೆ ಸಹಾಯಧನ


ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಮಕ್ಕಳ ಜನನಕ್ಕೆ ₹50,000 ಹೆರಿಗೆ ಸೌಲಭ್ಯ ನೀಡಲಾಗುತ್ತದೆ. ಕಾರ್ಮಿಕರು ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹60,000 ಮದುವೆ ಸಹಾಯಧನ ನೀಡಲಾಗುತ್ತದೆ.

ಕಾರ್ಮಿಕರ ನಿಧನದ ಸಂದರ್ಭದಲ್ಲಿ ₹4,000 ಅಂತ್ಯಕ್ರಿಯೆ ವೆಚ್ಚ ಹಾಗೂ ₹1.46 ಲಕ್ಷ ಅನುಗ್ರಹ ರಾಶಿ ನೀಡಲಾಗುತ್ತದೆ.


ವಸತಿ ಮತ್ತು ಉದ್ಯೋಗ ಸಹಾಯ


ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2 ಲಕ್ಷ ಮುಂಗಡ ವಸತಿ ಸೌಲಭ್ಯ ನೀಡಲಾಗುತ್ತದೆ. ಜೊತೆಗೆ ಕಾರ್ಮಿಕರ ಶ್ರಮ ಸಾಮರ್ಥ್ಯ ಹೆಚ್ಚಿಸಲು ಟ್ರೇನಿಂಗ್-ಕಮ್-ಟೂಲ್ ಕಿಟ್ ಯೋಜನೆಯಡಿ ₹20,000 ನೆರವು ನೀಡಲಾಗುತ್ತದೆ.

ಮಕ್ಕಳಿಗೆ ಶಿಕ್ಷಣ ಸಹಾಯಧನ


ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿವಿಧ ಮಟ್ಟಗಳಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.


1ರಿಂದ 5ನೇ ತರಗತಿ: ₹1,800


6ರಿಂದ 8ನೇ ತರಗತಿ: ₹2,400


9 ಮತ್ತು 10ನೇ ತರಗತಿ: ₹3,000


ಪಿಯುಸಿ / 11 ಮತ್ತು 12ನೇ ತರಗತಿ: ₹6,000


ಐಟಿಐ ಅಥವಾ ತಾಂತ್ರಿಕ ಕೋರ್ಸ್‌ಗಳು: ₹10,000


ಡಿಪ್ಲೋಮಾ: ₹12,000


ಸಾಮಾನ್ಯ ಪದವಿ ಕೋರ್ಸ್‌ಗಳು: ₹15,000


ವೃತ್ತಿಪರ ಕೋರ್ಸ್‌ಗಳು: ₹20,000 ರಿಂದ ₹35,000


ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳು (IIT, IIIT, IISc ಮುಂತಾದವು): ₹50,000 ರಿಂದ ₹60,000


ಇದರ ಜೊತೆಗೆ ಪಿಹೆಚ್‌ಡಿ ಮತ್ತು ಎಂಫಿಲ್ ಅಧ್ಯಯನಕ್ಕೂ ವಿಶೇಷ ಸಹಾಯಧನ ನೀಡಲಾಗುತ್ತದೆ.

ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಯೋಜನೆ


“ತಾಯಿ ಮಗು ಸಹಾಯ ಹಸ್ತ” ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ ಜನಿಸಿದ ಮಗುವಿನ ಪೌಷ್ಠಿಕತೆ ಮತ್ತು ಶಾಲಾಪೂರ್ವ ಶಿಕ್ಷಣಕ್ಕಾಗಿ ಮೂರು ವರ್ಷಗಳವರೆಗೆ ವಾರ್ಷಿಕ ₹6,000 ಸಹಾಯಧನ ನೀಡಲಾಗುತ್ತದೆ.


ಸುರಕ್ಷತೆ ಮತ್ತು ಆರೋಗ್ಯ ಕಾಳಜಿ


ಕಾರ್ಮಿಕರ ವೃತ್ತಿಗೆ ಅನುಗುಣವಾಗಿ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮೂಲಕ ಕಾರ್ಮಿಕರ ಆರೋಗ್ಯ ಕಾಳಜಿಯನ್ನು ಕೂಡ ಮಂಡಳಿ ವಹಿಸುತ್ತಿದೆ.


ಈ ಎಲ್ಲಾ ಯೋಜನೆಗಳ ಮೂಲಕ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಿ ಅವರ ಜೀವನಮಟ್ಟವನ್ನು ಉತ್ತಮಗೊಳಿಸುವುದೇ ಮಂಡಳಿಯ ಮುಖ್ಯ ಉದ್ದೇಶವಾಗಿದೆ. ನೋಂದಾಯಿತ ಕಾರ್ಮಿಕರು ಈ ಸೌಲಭ್ಯಗಳ ಸದುಪಯೋಗ ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Post a Comment

Previous Post Next Post