ಬೆಂಗಳೂರು:
ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಲನ್ನು ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ರೈತರು ಮತ್ತು ಸಹಕಾರಿ ಸಂಘಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿ, ಡಿ. ಕೆ. ಸುರೇಶ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತುರ್ತು ಹಸ್ತಕ್ಷೇಪ ಕೋರಿ ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ ಹಾಲು ಸಾಮಾನ್ಯ ವಾಣಿಜ್ಯ ವಸ್ತುವಲ್ಲ, ಅದು ಲಕ್ಷಾಂತರ ಹಾಲು ಉತ್ಪಾದಕರ ಜೀವನೋಪಾಯವಾಗಿದ್ದು, ಭಾರತದ ಸಹಕಾರಿ ಚಳುವಳಿಯ ಪ್ರಮುಖ ಆಧಾರವಾಗಿದೆ ಎಂದು ಅವರು ಹೇಳಿದ್ದಾರೆ. ಕ್ವಿಕ್ ಕಾಮರ್ಸ್ ಸಂಸ್ಥೆಗಳು ಹಾಲನ್ನು ಪ್ರಚಾರ ಸಾಧನವಾಗಿ ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ರೈತರು, ಸಹಕಾರಿ ಸಂಸ್ಥೆಗಳು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ, ಇಂತಹ ‘ಪ್ರೆಡೇಟರಿ ಪ್ರೈಸಿಂಗ್’ (ಅತೀ ಕಡಿಮೆ ಬೆಲೆ ನಿಗದಿ) ಕ್ರಮಗಳನ್ನು ನಿಯಂತ್ರಿಸುವಂತೆ ಅವರು ಪ್ರಧಾನಮಂತ್ರಿಗೆ ಮನವಿ ಮಾಡಿದ್ದಾರೆ.
ಹಾಲು ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಇವುಗಳ ಸ್ಥಿರತೆ ರೈತರ ಆರ್ಥಿಕ ಭದ್ರತೆಗೆ ಅಗತ್ಯವೆಂದು ಡಿ.ಕೆ. ಸುರೇಶ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡು ರೈತರು ಹಾಗೂ ಸಹಕಾರಿ ಸಂಘಗಳ ಹಿತವನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Post a Comment