ಬೆಂಗಳೂರು, ಮಾರ್ಚ್ ೩೦: ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ‘ಮೈ ಬ್ರದರ್ಸ್’ (ನನ್ನ ಸಹೋದರರು) ಎಂದು ಸಮರ್ಥಿಸಿಕೊಂಡಿದ್ದ ಆರೋಪಿ ಮೊಹಮ್ಮದ್ ಶಾರಿಕ್, ಇದೀಗ ನ್ಯಾಯಾಲಯದಲ್ಲಿ ತಾನೇ ತಪ್ಪೊಪ್ಪಿಕೊಂಡಿದ್ದಾನೆ. ಕದ್ರಿ ಮಂಜುನಾಥ ದೇವಸ್ಥಾನವನ್ನು ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿರುವ ಈ ಬೆಳವಣಿಗೆ, ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
‘ಉಗ್ರ’ನಿಗೆ ‘ಬ್ರದರ್’ ಎಂದ ಕಾಂಗ್ರೆಸ್ ನಾಯಕರು
೨೦೨೨ರ ನವೆಂಬರ್ನಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡ ಸಂದರ್ಭದಲ್ಲಿ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿಕೆ ನೀಡಿದ್ದರು. ಆಗ ಅವರು, “ಯಾರು ಟೆರರಿಸ್ಟ್ ಅಂತ ಹೇಳೋದು? ತನಿಖೆ ಇಲ್ಲದೆ ಹೇಗೆ ಕರೆಯೋದು?” ಎಂದು ಪ್ರಶ್ನಿಸಿದ್ದರು ಮಾತ್ರವಲ್ಲದೆ, ಆರೋಪಿಯನ್ನು ಪರೋಕ್ಷವಾಗಿ ‘ತಮ್ಮ ಸಹೋದರ’ ಎಂದು ಉದ್ದೇಶಿಸಿ ಮಾತನಾಡಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ವಿವಾದ ಸೃಷ್ಟಿಸಿತ್ತು.
ಶಾರಿಕ್ ನ್ಯಾಯಾಲಯದಲ್ಲಿ ಸತ್ಯ ಬಹಿರಂಗಪಡಿಸಿದ್ದು ಏನು?
ಪ್ರಕರಣದ ವಿಚಾರಣೆ ವೇಳೆ, ಮುಖ್ಯ ಆರೋಪಿ ಮೊಹಮ್ಮದ್ ಶಾರಿಕ್ ಇದೀಗ ತಪ್ಪೊಪ್ಪಿಗೆ ಸಲ್ಲಿಸಿದ್ದಾನೆ. ಈ ಹಿಂದೆ ನಿರಾಕರಿಸಿದ್ದ ಆರೋಪಗಳನ್ನು ಒಪ್ಪಿಕೊಂಡ ಶಾರಿಕ್, ತಾನು ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಗೊಳಿಸಲು ಯೋಜಿಸಿದ್ದುದಾಗಿ ಮತ್ತು ಐಇಡಿ ತಯಾರಿಸಿದುದಾಗಿ ಒಪ್ಪಿಕೊಂಡಿದ್ದಾನೆ. ಈತ ೨೦೨೨ರಲ್ಲಿ ಶಿವಮೊಗ್ಗ ಐಎಸ್ ಮಾಡ್ಯೂಲ್ನ ಭಾಗವಾಗಿದ್ದು, ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಎನ್ಐಎ ಶೋಧಿಸಿದೆ.
ಬಿಜೆಪಿ ಆಕ್ರೋಶ: ‘ಉಗ್ರರಿಗೆ ಕಾಂಗ್ರೆಸ್ ಗ್ಯಾರಂಟಿ’
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಸುತ್ತಿಕೊಂಡಿದೆ. “ಒಂದು ಸಮುದಾಯದ ಅಲ್ಪ ಮತಗಳಿಗಾಗಿ, ಕಾಂಗ್ರೆಸ್ ನಾಯಕರು ಉಗ್ರನಿಗೇ ಸರ್ಟಿಫಿಕೇಟ್ ನೀಡುವ ಕೆಲಸ ಮಾಡಿದರು. ಶಾರಿಕ್ ಈಗ ದೇವಸ್ಥಾನ ಸ್ಫೋಟದ ಸಂಚು ಒಪ್ಪಿಕೊಂಡಿದ್ದಾನೆ. ಇನ್ನು ಅವನು ‘ಮೈ ಬ್ರದರ್’ ಅಲ್ಲ, ದೇಶದ್ರೋಹಿ. ಕಾಂಗ್ರೆಸ್ ನಾಯಕರಿಗೆ ಉಗ್ರರನ್ನು ಗುರುತಿಸಲೂ ಬರುತ್ತಿಲ್ಲವೇ? ಅಥವಾ ಉದ್ದೇಶಪೂರ್ವಕವಾಗಿ ಅವರ ಪರ ವಕಾಲತ್ತು ವಹಿಸುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದೆ.
ಇದೇ ವೇಳೆ, “ಕಾಂಗ್ರೆಸ್ ಪಕ್ಷವು ಉಗ್ರರ ಹಿತರಕ್ಷಣೆಗಾಗಿ ‘ಗ್ಯಾರಂಟಿ ಭಾಗ್ಯ’ಗಳನ್ನು ನೀಡಿದರೂ ಆಶ್ಚರ್ಯವೇನಿಲ್ಲ. ಅವರಿಗೆ ಮತ್ತೊಮ್ಮೆ ಅಧಿಕಾರ ಸಿಕ್ಕರೆ, ದೇಶದ ಭದ್ರತೆಗೆ ದೊಡ್ಡ ಅಪಾಯ ಎಂಬುದಕ್ಕೆ ಇದು ನಿದರ್ಶನ” ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಾಲಿಗೆ ಮುಜುಗರದ ಪ್ರಶ್ನೆ
ಈಗ ಎಲ್ಲರ ಕಣ್ಣುಗಳೂ ಕಾಂಗ್ರೆಸ್ ನಾಯಕರ ಹೇಳಿಕೆಗಳತ್ತ ನೆಟ್ಟಿವೆ. ನಾಲ್ಕು ವರ್ಷಗಳ ಹಿಂದೆ ‘ಮೈ ಬ್ರದರ್ಸ್’ ಎಂದು ಉಗ್ರನನ್ನು ರಕ್ಷಿಸಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು, ಇಂದು ಆರೋಪಿ ಸ್ವತಃ ತಪ್ಪೊಪ್ಪಿಕೊಂಡ ಬಳಿಕ ಏನು ಹೇಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Post a Comment