ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆ ನಡುವೆ ಫುಟ್‌ಪಾತ್ ಮೇಲೆ ವಾಹನಗಳನ್ನು ಓಡಿಸುವ ಚಾಲಕರ ವಿರುದ್ಧ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದು, ಈ ಕುರಿತು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಜಾಗೃತಿ ಸಂದೇಶ ಪ್ರಕಟಿಸಿದ್ದಾರೆ.
“ಫುಟ್‌ಪಾತ್ ಪಾದಚಾರಿಗಳಿಗಾಗಿ, ವಾಹನಗಳಿಗಲ್ಲ! ಫುಟ್‌ಪಾತ್ ಮೇಲೆ ವಾಹನ ಓಡಿಸಿ ಪಾದಚಾರಿಗಳನ್ನು ರಸ್ತೆಗೆ ತಳ್ಳಬೇಡಿ. ನಿಮ್ಮ ಒಂದು ‘ಶಾರ್ಟ್‌ಕಟ್’ ಮತ್ತೊಬ್ಬರ ಜೀವಕ್ಕೆ ಕುತ್ತಾಗಬಹುದು. ನಿಯಮ ಗೌರವಿಸಿ, ಪಾದಚಾರಿಗಳಿಗೆ ದಾರಿ ಬಿಡಿ,” ಎಂದು ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಡುವೆ ಕೆಲವರು ಟ್ರಾಫಿಕ್ ತಪ್ಪಿಸಲು ಫುಟ್‌ಪಾತ್ ಮೇಲೆಯೇ ಬೈಕ್ ಹಾಗೂ ಇತರೆ ವಾಹನಗಳನ್ನು ಓಡಿಸುವ ಘಟನೆಗಳು ಹೆಚ್ಚಾಗುತ್ತಿರುವುದನ್ನು ಪೊಲೀಸರು ಗಮನಿಸಿದ್ದು, ಇದು ಪಾದಚಾರಿಗಳ ಸುರಕ್ಷತೆಗೆ ದೊಡ್ಡ ಅಪಾಯವೆಂದು ಎಚ್ಚರಿಸಿದ್ದಾರೆ. ಫುಟ್‌ಪಾತ್‌ಗಳು ಪಾದಚಾರಿಗಳು ಸುರಕ್ಷಿತವಾಗಿ ನಡೆಯಲು ನಿರ್ಮಿಸಲಾಗಿದ್ದು, ಅವುಗಳನ್ನು ವಾಹನಗಳಿಗೆ ಬಳಸುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿಯ ನಿಯಮ ಉಲ್ಲಂಘನೆಗಳು ನಡೆದರೆ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮವೂ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ರಸ್ತೆ ಸುರಕ್ಷತೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ನಗರದಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರು ನಿರಂತರವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದು, ಪಾದಚಾರಿಗಳ ಹಕ್ಕುಗಳನ್ನು ಗೌರವಿಸುವುದು ಪ್ರತಿಯೊಬ್ಬ ವಾಹನ ಚಾಲಕರ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Post a Comment