ಬೆಂಗಳೂರು: ನೈರುತ್ಯ ರೈಲ್ವೇ ಇಲಾಖೆಯ ಗೂಡ್ಸ್ ರೈಲು ಮ್ಯಾನೇಜರ್ ಮತ್ತು ಎಲ್‌ಡಿಸಿಇ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಿರುವ ಕ್ರಮವನ್ನು ಮುಖ್ಯಮಂತ್ರಿ Siddaramaiah ತೀವ್ರವಾಗಿ ಖಂಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಿಎಂ, ಕನ್ನಡಿಗ ಉದ್ಯೋಗಾಕಾಂಕ್ಷಿಗಳ ನಿರಂತರ ಪ್ರತಿಭಟನೆ ಮತ್ತು ಬೇಡಿಕೆಗಳನ್ನು ನಿರ್ಲಕ್ಷಿಸಿ, ಪರೀಕ್ಷೆ ಆರಂಭವಾಗುವ ಮುನ್ನವೇ ತುರ್ತಾಗಿ ರದ್ದುಪಡಿಸಿರುವುದು ಸಾವಿರಾರು ಅಭ್ಯರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದೆ ಎಂದು ಹೇಳಿದ್ದಾರೆ.
ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಲು ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಆರಂಭದಿಂದಲೇ ಕನ್ನಡಿಗರು ಮುಂದಿಟ್ಟಿದ್ದರು. ಆದರೆ, ರೈಲ್ವೇ ಇಲಾಖೆ ಈ ಬೇಡಿಕೆಯನ್ನು ಪರಿಗಣಿಸದೇ ಕೊನೆಯ ಕ್ಷಣದಲ್ಲಿ ಪರೀಕ್ಷೆ ರದ್ದುಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಪ್ರಾರಂಭದಲ್ಲಿಯೇ ಇಲಾಖೆ ಕನ್ನಡದಲ್ಲಿ ಪರೀಕ್ಷೆ ನಡೆಸಲು ಅವಕಾಶ ನೀಡಿದ್ದರೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕನ್ನಡಿಗರನ್ನು ತಾತ್ಸಾರದಿಂದ ಕಂಡು, ಪ್ರತಿಭಟನೆ ಹೆಚ್ಚಾದ ಬಳಿಕ ತುರ್ತು ನಿರ್ಧಾರ ತೆಗೆದುಕೊಳ್ಳುವುದು ಖಂಡನೀಯ ಎಂದು ಟೀಕಿಸಿದ್ದಾರೆ.
ಇದೇ ವೇಳೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಮಾತ್ರ ಅವಕಾಶ ನೀಡುವ ನೀತಿಯಿಂದ ಕನ್ನಡಿಗರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. “ನಾವು ಹಿಂದಿ ಭಾಷೆಯನ್ನು ವಿರೋಧಿಸುವುದಿಲ್ಲ, ಆದರೆ ಅದನ್ನು ಕನ್ನಡದ ಮೇಲೆ ಹೇರುವುದನ್ನು ಖಂಡಿತ ಸಹಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ V. Somanna ಕನ್ನಡಿಗರ ಪರವಾಗಿ ನಿಂತು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಸಿಎಂ ಆಗ್ರಹಿಸಿದ್ದಾರೆ.
ಭಾರತವು ಭಾಷಾ ಆಧಾರಿತ ರಾಜ್ಯಗಳ ಒಕ್ಕೂಟವಾಗಿರುವುದನ್ನು ಮರೆಯಬಾರದು ಎಂದು ಹೇಳಿದ ಸಿಎಂ, ಕನ್ನಡಿಗರು ತಮ್ಮ ಶಿಕ್ಷಣ ಪಡೆದ ಭಾಷೆಯಲ್ಲೇ ಉದ್ಯೋಗ ಅವಕಾಶಗಳನ್ನು ಕೇಳುತ್ತಿರುವುದು ಸಂವಿಧಾನಬದ್ಧ ಹಕ್ಕು ಎಂದು ಒತ್ತಿ ಹೇಳಿದ್ದಾರೆ.
ರದ್ದುಪಡಿಸಲಾದ ರೈಲ್ವೇ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಿ ಶೀಘ್ರದಲ್ಲೇ ಮರುನಡೆಸುವಂತೆ ಮುಖ್ಯಮಂತ್ರಿ
ಆಗ್ರಹಿಸಿದ್ದಾರೆ.

Post a Comment