ಕಾಯಕ, ದಾಸೋಹ, ಸಮಾನತೆಯ ತತ್ವ ಸಾರುವ ಐತಿಹಾಸಿಕ ಜಾತ್ರೆಗೆ ಭಕ್ತರ ಸಾಗರ
ಉಪ್ಪಿನಬೆಟಗೇರಿ (ಧಾರವಾಡ ಜಿಲ್ಲೆ), ಮಾರ್ಚ್ 21: ಸುಕ್ಷೇತ್ರ ಉಪ್ಪಿನಬೆಟಗೇರಿ ಶ್ರೀ ಜಗದ್ಗುರು ಮೂರುಸಾವಿರ ವಿರಕ್ತಮಠದ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಈ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಈ ಮಠವು ಕಾಯಕ, ದಾಸೋಹ, ಸಮಾನತೆ ಮತ್ತು ಶಿವಾನುಭವ ತತ್ವವನ್ನು ನಾಡಿನಾದ್ಯಂತ ಸಾರಿ ಶಾಂತಿ ಕಾಪಾಡುವ ಕೆಲಸವನ್ನು ಸದಾ ಮಾಡುತ್ತಲೇ ಬಂದಿದೆ. ಈ ಐತಿಹಾಸಿಕ ಜಾತ್ರೆಯು ಧಾರ್ಮಿಕ ವಿಧಿವಿಧಾನಗಳು, ರಥೋತ್ಸವ ಮತ್ತು ಭಕ್ತರ ಸಮಾಗಮದಿಂದ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವರು ಶ್ರೀ ಗುರು ವಿರೂಪಾಕ್ಷೇಶ್ವರರ ದರ್ಶನ ಪಡೆದು, ದೇವರ ಕೃಪಾಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದರು.
ಮಠಾಧೀಶರ ಸಾನ್ನಿಧ್ಯ:
ಈ ಕಾರ್ಯಕ್ರಮವು ಧಾರವಾಡ ಶ್ರೀ ಮುರುಘಾಮಠದ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯ, ಬೈಲಹೊಂಗಲ ಶ್ರೀ ಮೂರುಸಾವಿರ ಮಠದ ಶ್ರೀ ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳ ಸಾನ್ನಿಧ್ಯ, ಮಾದನ ಹಿಪ್ಪರಗಿ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಗರಗ ಗ್ರಾಮದ ಹಿರಿಯರು, ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಭಕ್ತರ ಸಮಾಗಮದಿಂದ ಮಠದ ಆವರಣ ಭಕ್ತಿಪರವಶಗೊಂಡಿತ್ತು.

Post a Comment