Top News

ಮಕ್ಕಳ ಅಪಹರಣ ತಡೆಗೆ ತಳಮಟ್ಟದ ಕ್ರಮ: ಗ್ರಾಪಂಗಳಲ್ಲಿ ಮಹಿಳೆ-ಮಕ್ಕಳ ರಕ್ಷಣಾ ಸಮಿತಿ ರಚಿಸಲು ಸುತ್ತೋಲೆ


 ಕಳೆದ 3 ವರ್ಷಗಳಲ್ಲಿ 9,597 ಮಕ್ಕಳ ಅಪಹರಣ, 1,094 ಇನ್ನೂ ಪತ್ತೆಯಾಗಿಲ್ಲ


ಬೆಂಗಳೂರು, ಮಾರ್ಚ್ 21: ರಾಜ್ಯದಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ, ಅವುಗಳ ತಡೆಗೆ ತಳಮಟ್ಟದಿಂದ ಕ್ರಮಗಳನ್ನು ಜಾರಿಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆ ವಿವರವಾದ ಸುತ್ತೋಲೆ ಹೊರಡಿಸಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ’ ರಚಿಸುವುದು ಸೇರಿದಂತೆ ಐದು ಪ್ರಮುಖ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗಿದೆ.


ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,748 ಬಾಲಕರು ಮತ್ತು 6,891 ಬಾಲಕಿಯರು ಸೇರಿದಂತೆ ಒಟ್ಟು 9,597 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ. ಈ ಪೈಕಿ 1,094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ವರದಿಯನ್ನು ಆಧರಿಸಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಅದರಂತೆ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.


ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆಯಲ್ಲಿ ನೀಡಿರುವ ಪ್ರಮುಖ ನಿರ್ದೇಶನಗಳು:


1. ಮಹಿಳೆ-ಮಕ್ಕಳ ರಕ್ಷಣಾ ಕಾವಲು ಸಮಿತಿ ರಚನೆ: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಈ ಸಮಿತಿಯನ್ನು ರಚಿಸಿ, ನಿಯಮಿತವಾಗಿ ಸಭೆ ನಡೆಸಬೇಕು. ಮಕ್ಕಳ ಸುರಕ್ಷತೆ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

2. ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ: ಆಯಾ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಸ್ಥಿತಿ-ಗತಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ, ವಿಶ್ಲೇಷಣೆ ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು.

3. ಗ್ರಾಮ ಸಭೆಗಳಲ್ಲಿ ಜಾಗೃತಿ: ಮಕ್ಕಳ ಹಕ್ಕುಗಳ ಕುರಿತ ಗ್ರಾಮ ಸಭೆಗಳಲ್ಲಿ ಮಕ್ಕಳ ಅಪಹರಣ ಮತ್ತು ನಾಪತ್ತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.

4. ಶಿಕ್ಷಣ ಕಾರ್ಯಪಡೆ ರಚನೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ಕಾರ್ಯಪಡೆಯನ್ನು ಕಡ್ಡಾಯವಾಗಿ ರಚಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿ ಜೊತೆಗೆ ಅವರ ಸುರಕ್ಷತೆಯನ್ನು ಪ್ರಮುಖ ವಿಷಯವಾಗಿ ಚರ್ಚಿಸಬೇಕು.

5. ಗ್ರಂಥಾಲಯಗಳ ಮೂಲಕ ಜಾಗೃತಿ: ಪಂಚಾಯಿತಿ ಅರಿವು ಕೇಂದ್ರಗಳಲ್ಲಿನ ‘ಮಾಹೆಯಾನ ಓದುವ ಬೆಳಕು’ ಕಾರ್ಯಕ್ರಮದಲ್ಲಿ ಗ್ರಂಥಪಾಲಕರು ಮಕ್ಕಳಿಗೆ ಸುರಕ್ಷತಾ ಕುರಿತು ಮಾಹಿತಿ ನೀಡುವಂತೆ ನೋಡಿಕೊಳ್ಳಬೇಕು.


ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಈ ಸುತ್ತೋಲೆಯನ್ನು ಸ್ವಾಗತಿಸಿದ್ದು, “ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಇದು ಮಾರ್ಗದರ್ಶಿಯಾಗಲಿ, ಮಕ್ಕಳ ಅಪಹರಣ ಸಂಪೂರ್ಣವಾಗಿ ನಿಲ್ಲಲಿ ಎಂಬುದೇ ನನ್ನ ಆಶಯ” ಎಂದು ತಿಳಿಸಿದ್ದಾರೆ.


ಈ ಸುತ್ತೋಲೆಯ ಮೂಲಕ ಮಕ್ಕಳ ಸುರಕ್ಷತೆಗೆ ಸ್ಥಳೀಯ ಆಡಳಿತಗಳನ್ನು ಸಕ್ರಿಯಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Post a Comment

Previous Post Next Post