Top News

LPG ಸಿಲಿಂಡರ್ ಕೊರತೆ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸ್ಪಷ್ಟನೆ

 ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಗೃಹ ಬಳಕೆಯ ಅಡುಗೆ ಅನಿಲ (LPG) ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸಂಪೂರ್ಣ ಅಸತ್ಯವಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಶುಕ್ರವಾರ ಪ್ರಕಟಣೆ ನೀಡಲಾಗಿದ್ದು, ಜಿಲ್ಲೆಗೆ ಅಗತ್ಯವಿರುವ ಪ್ರಮಾಣದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳು ಹಿಂದಿನಂತೆಯೇ ಸರಬರಾಜಾಗುತ್ತಿವೆ ಎಂದು ತಿಳಿಸಲಾಗಿದೆ. ಮಾರ್ಚ್ 12, 2026ರ ವೇಳೆಗೆ ಜಿಲ್ಲೆಯಲ್ಲಿ ಸುಮಾರು 11,355 ಗೃಹ ಬಳಕೆಯ LPG ಸಿಲಿಂಡರ್‌ಗಳು ದಾಸ್ತಾನಾಗಿ ಲಭ್ಯವಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.


ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡದೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಇದೇ ವೇಳೆ ಗೃಹ ಬಳಕೆಯ LPG ಸಿಲಿಂಡರ್‌ಗಳನ್ನು ಅಕ್ರಮವಾಗಿ ಹೆಚ್ಚುವರಿಯಾಗಿ ದಾಸ್ತಾನು ಮಾಡುವುದು, ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಹಾಗೂ ಮಾರುಕಟ್ಟೆಗೆ diversion ಮಾಡುವ ಪ್ರಕರಣಗಳನ್ನು ತಡೆಯಲು ತಾಲ್ಲೂಕು ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಯಾರಾದರೂ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸುವುದು ಅಥವಾ ದುರುಪಯೋಗಪಡಿಸುವುದು ಪತ್ತೆಯಾದಲ್ಲಿ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ–1955ರ ಅನ್ವಯ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


ಜಿಲ್ಲೆಯ ಜನರಿಗೆ ಈ ಮಾಹಿತಿ ವ್ಯಾಪಕವಾಗಿ ತಲುಪುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರಕಟಣೆ ಕಳುಹಿಸಲಾಗಿದೆ.

Post a Comment

Previous Post Next Post