Top News

ಕೋರಮಂಗಲದಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಸಿಎಂ ಸಿದ್ದರಾಮಯ್ಯ ಅವರಿಂದ 158 ಮಂದಿಗೆ 'ಮುಖ್ಯಮಂತ್ರಿಗಳ ಪದಕ' ಪ್ರದಾನ


 ಬೆಂಗಳೂರು, ಏಪ್ರಿಲ್ 2: ಕೋರಮಂಗಲದ ಕೆಎಸ್ಆರ್ಪಿ ಪರೇಡ್ ಮೈದಾನದಲ್ಲಿ ಇಂದು ವಿಜೃಂಭಣೆಯಿಂದ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ 'ಮುಖ್ಯಮಂತ್ರಿಗಳ ಪದಕ' ಪ್ರದಾನ ಮಾಡಿ, 158 ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಿದರು.


3 ವರ್ಷದ ಬಾಕಿ ಪದಕಗಳನ್ನು ಒಟ್ಟಿಗೆ ವಿತರಣೆ


ಕಳೆದ ಮೂರು ವರ್ಷಗಳಿಂದ ಬಾಕಿ ಇದ್ದ ಮುಖ್ಯಮಂತ್ರಿಗಳ ಪದಕಗಳನ್ನು ಈ ಬಾರಿ ಒಟ್ಟಿಗೆ ವಿತರಿಸಲಾಯಿತು. 2022, 2023 ಮತ್ತು 2024ನೇ ಸಾಲಿನ ಪದಕಗಳನ್ನು ಒಟ್ಟು 475 ಮಂದಿಗೆ ನೀಡಲಾಯಿತು. ಇದೇ ವೇಳೆ 2025ನೇ ಸಾಲಿನ 158 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ವಿತರಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯುತ್ತಮ ಎಂಬ ಬಿರುದಿಗೆ ಪಾತ್ರವಾಗಿದೆ. ಎಲ್ಲಿಯೇ ಕಾನೂನು ಮತ್ತು ಸುವ್ಯವಸ್ಥೆ ಇರುತ್ತದೆಯೋ, ಆ ರಾಜ್ಯದ ಅಭಿವೃದ್ಧಿಯಾಗುತ್ತದೆ" ಎಂದು ಹೇಳಿದರು. ಅಲ್ಲದೆ, ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮತ್ತು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸರು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.


ಕವಿತಾಳ ಪೊಲೀಸ್ ಠಾಣೆಗೆ ರಾಷ್ಟ್ರೀಯ ಮನ್ನಣೆ


ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, "ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ಕೇಂದ್ರ ಗೃಹ ಇಲಾಖೆಯ 2025ನೇ ಸಾಲಿನ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ದೇಶದಲ್ಲೇ ತೃತೀಯ ಸ್ಥಾನ ಪಡೆದುಕೊಂಡಿದೆ" ಎಂದು ಹೆಮ್ಮೆಯಿಂದ ತಿಳಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.


ಕವಿತಾಳ ಠಾಣೆಯನ್ನು ಜನಸ್ನೇಹಿ ಸೇವೆಗಳು, ಪ್ರಕರಣಗಳ ತ್ವರಿತ ಇತ್ಯರ್ಥ, ಮಹಿಳಾ ದೂರುದಾರರಿಗೆ ಆದ್ಯತೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ 78 ಪೊಲೀಸ್ ಠಾಣೆಗಳನ್ನು ಪರಿಗಣಿಸಲಾಗಿದ್ದು, ಅಂತಿಮ ಹಂತದಲ್ಲಿ ಕವಿತಾಳ ಠಾಣೆಗೆ ತೃತೀಯ ಸ್ಥಾನ ದೊರಕಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಕವಿತಾಳ ಠಾಣೆಯಂತೆಯೇ ಅತ್ಯುತ್ತಮ ಪೊಲೀಸ್ ಠಾಣೆಗಳಾಗಬೇಕು ಎಂದು ಸರ್ಕಾರ ಬಯಸುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ಗೃಹ ಸಚಿವರ ಮಾತುಗಳು


ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾಮಾಣಿಕತೆ ಮತ್ತು ಸಾಧನೆಗಳನ್ನು ಶ್ಲಾಘಿಸಿದರು. ಅಪರಾಧ ಮತ್ತು ಮಾದಕ ವ್ಯಸನವನ್ನು ನಿರ್ಮೂಲನೆ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು, ಸೈಬರ್ ಅಪರಾಧ ಪ್ರಕರಣಗಳ ಕಡಿತದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಹೇಳಿದರು.


ಹಿರಿಯ ಅಧಿಕಾರಿಗಳ ಉಪಸ್ಥಿತಿ


ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಎಡಿಜಿಪಿ ಮುರುಗನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ಸಮರ್ಪಣಾ ಮನೋಭಾವಕ್ಕೆ ಸರ್ಕಾರದ ಪೂರ್ಣ ಬೆಂಬಲವಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Post a Comment

Previous Post Next Post