Top News

ಕೆ-ಜಿಐಎಸ್ 2.0: ಸ್ಥಳೀಯ ಆಡಳಿತ ಸಮಸ್ಯೆಗಳಿಗೆ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಮೂಲಕ ಪರಿಹಾರ – ಜಿಲ್ಲಾಧಿಕಾರಿ ಶ್ರೀರೂಪ


 ಚಾಮರಾಜನಗರ, ಏಪ್ರಿಲ್ ೨: ಸ್ಥಳೀಯ ಆಡಳಿತದ ಸಮಸ್ಯೆಗಳನ್ನು ಕೇಂದ್ರಿಕರಿಸಿ ಪರಿಹರಿಸಲು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಕೆ-ಜಿಐಎಸ್ 2.0) ಸುಧಾರಿತ ತಂತ್ರಜ್ಞಾನವು ಬಹುಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಅಭಿಪ್ರಾಯಪಟ್ಟಿದ್ದಾರೆ.


ನಗರದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ 'ಸ್ಥಳೀಯ ಆಡಳಿತಕ್ಕಾಗಿ ಜಿಐಎಸ್ ಆಧಾರಿತ ಮಾಹಿತಿ ತಲುಪಿಸುವ ಕೆ-ಜಿಐಎಸ್ 2.0 ಅನುಷ್ಠಾನ' ಕುರಿತ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ


ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ, "ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಮಸ್ಯೆಗಳನ್ನು ಜಿಐಎಸ್ ಮೂಲಕ ತಾಂತ್ರಿಕವಾಗಿ ಪರಿಹರಿಸಲು ಜಿಲ್ಲಾಮಟ್ಟದ ವಿವಿಧ ಇಲಾಖೆಗಳಲ್ಲಿ ಜಿಐಎಸ್ ತಂತ್ರಾಂಶ ಮತ್ತು ದತ್ತಾಂಶಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಭೌಗೋಳಿಕವಾಗಿ ವಿಸ್ತಾರವಾದ ಕ್ಷೇತ್ರ ಹೊಂದಿರುವ ಶಿಕ್ಷಣ, ಆರೋಗ್ಯ, ಅರಣ್ಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪಾರದರ್ಶಕ ಆಡಳಿತ, ಸಮಗ್ರ ದತ್ತಾಂಶ ಸಂಗ್ರಹಣೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಕೆ-ಜಿಐಎಸ್ 2.0 ಸುಧಾರಿತ ತಂತ್ರಜ್ಞಾನ ನೆರವಾಗಲಿದೆ. ತಂತ್ರಜ್ಞಾನ ಅಳವಡಿಕೆಗೆ ಅಧಿಕಾರಿಗಳು ಮುಂದಾಗಬೇಕು" ಎಂದರು.


ಜಿಯೋಟ್ಯಾಗ್ ಕಡ್ಡಾಯ: ಕುಳಿತಲ್ಲೇ ಮೇಲ್ವಿಚಾರಣೆ ಸಾಧ್ಯ


ಪ್ರತಿದಿನದ ಕಾರ್ಯವೈಖರಿಗಳನ್ನು ದಾಖಲೀಕರಣದೊಂದಿಗೆ ಜಿಯೋಟ್ಯಾಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಆರೋಗ್ಯ ಕೇಂದ್ರಗಳು, ಹಾಸ್ಟೆಲ್ಗಳು, ಅಂಗನವಾಡಿಗಳಲ್ಲಿ ಯಾರು, ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಜಿಲ್ಲೆಯಲ್ಲಿ ನೋಟಿಫೈ ಅರಣ್ಯ ಪ್ರದೇಶದ ವಿಸ್ತಾರ ಎಷ್ಟಿದೆ ಎಂಬುದನ್ನು ತಾಂತ್ರಿಕವಾಗಿ ಅರಿಯಲು ಕೆ-ಜಿಐಎಸ್ 2.0 ಮಾಹಿತಿ ಒದಗಿಸಲಿದೆ. ನಮ್ಮ ಮುಂದಿನ ಪೀಳಿಗೆಗೂ ಇದು ಸದುಪಯೋಗವಾಗಲಿದೆ ಎಂದು ಅವರು ತಿಳಿಸಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತು


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ, ಕೆ-ಜಿಐಎಸ್ 2.0 ತಂತ್ರಜ್ಞಾನ ನಮ್ಮ ಜಿಲ್ಲೆಗೆ ತುಂಬಾ ಉಪಯುಕ್ತವಾಗಲಿದೆ. ಎಲ್ಲಾ ಅಂಗನವಾಡಿ, ಪ್ರೌಢಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿನ ಮೂಲಸೌಕರ್ಯಗಳ ಸಮಗ್ರ ಮಾಹಿತಿ ಲಭ್ಯವಾಗಲಿದೆ. ತಾಂತ್ರಿಕತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯು ಮುಂಚೂಣಿಗೆ ಬರಬೇಕಾಗಿದೆ. ಕಾರ್ಯಾಗಾರದಲ್ಲಿ ಕೆ-ಜಿಐಎಸ್ 2.0 ತಂತ್ರಜ್ಞಾನದ ಕುರಿತು ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಲಹೆ ಮಾಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರ ಅಭಿಪ್ರಾಯ


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಮಾತನಾಡಿ, ತಾಂತ್ರಿಕತೆ ಈಗ ಸಾಕಷ್ಟು ಮುಂದುವರೆದಿದೆ. ಕೃಷಿ ಭೂಮಿಗೆ ಬೇಕಾದ ಪೋಷಕಾಂಶಗಳ ಮಾಹಿತಿ, ಮಣ್ಣಿನ ಆರೋಗ್ಯ, ಬೆಳೆ ಸರ್ವೆ, ಬೆಳೆ ನಷ್ಟದ ಮಾಹಿತಿ ಕೆ-ಜಿಐಎಸ್ 2.0 ತಂತ್ರಜ್ಞಾನದಿಂದ ದೊರೆಯಲಿದೆ. ಪೊಲೀಸ್ ಇಲಾಖೆಗೆ ಮೊಬೈಲ್ ಅಪ್ಲಿಕೇಶನ್ ನೆರವು ನೀಡಲಿದೆ. ಈ ತಂತ್ರಜ್ಞಾನವನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ದೂರಸಂವೇದಿ ಕೇಂದ್ರದ ನಿರ್ದೇಶಕ ಎನ್.ಎಲ್. ರಾಜೇಶ್ ಮಾಹಿತಿ


ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರಾದ ಎನ್.ಎಲ್. ರಾಜೇಶ್ ಅವರು ಮಾತನಾಡಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಧೀನದಲ್ಲಿ ಕೇಂದ್ರವು ಕೆ-ಜಿಐಎಸ್ 2.0 ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಭೌಗೋಳಿಕ, ಆರ್ಥಿಕ ವ್ಯತ್ಯಾಸಗಳನ್ನು ತಂತ್ರಜ್ಞಾನದ ಮೂಲಕ ಸರಿಪಡಿಸಲು ವಿವಿಧ ಇಲಾಖೆಗಳ ಸಮನ್ವಯ ಅವಶ್ಯಕ. ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಕೆ-ಜಿಐಎಸ್ 2.0 ವ್ಯವಸ್ಥೆಯ ಬಹುಮುಖ್ಯ ಉದ್ದೇಶವಾಗಿದೆ ಎಂದರು.


ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಅನುಷ್ಠಾನ


ಇಡೀ ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಮಾತ್ರ ಈ ಕೆ-ಜಿಐಎಸ್ 2.0 ವ್ಯವಸ್ಥೆ ಅನುಷ್ಠಾನಗೊಂಡಿದೆ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗಿನ ಸಂಪೂರ್ಣ, ಸಮಗ್ರ ಮಾಹಿತಿಗಾಗಿ ಡ್ಯಾಶ್ ಬೋರ್ಡ್ ಸಿದ್ಧಪಡಿಸಲಾಗಿದೆ. ಇದು ತಳಮಟ್ಟದ ಸಮಸ್ಯೆಗಳನ್ನು ಅರಿಯಲು ವೇದಿಕೆಯಾಗಲಿದೆ.


ಕೃಷಿ ವಿಮೆ, ಬೆಳೆ ನಷ್ಟದ ಪರಿಹಾರ ನೀಡಿಕೆ, ಕೈಗಾರಿಕಾ ಭೂ ವ್ಯಾಜ್ಯಗಳ ಪರಿಹಾರ, ಅರಣ್ಯಗಳ ಗಡಿ ನಕ್ಷೆಯ ಸಂಪೂರ್ಣ ಮಾಹಿತಿ, ಹಾಸ್ಟೆಲ್, ಅಂಗನವಾಡಿಗಳು, ಶಾಲಾವಲಯಗಳು, ಮಾದರಿ ಅರಣ್ಯಗಳು, ಆರೋಗ್ಯ ಕೇಂದ್ರಗಳ ಕುರಿತ ಹತ್ತು ವರ್ಷಗಳ ಮಾಹಿತಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.


ನಾಗರಿಕರಿಗೆ ಸುಲಭ ಮಾಹಿತಿಗಾಗಿ ಅಪ್ಡೇಟ್ ಮಾಹಿತಿ ಕಡ್ಡಾಯ


ಕೆಜಿಐಎಸ್ 2.0 ವ್ಯವಸ್ಥೆಯು ಜಿಐಎಸ್ ಆಧಾರಿತ ನೈಜ ದತ್ತಾಂಶ, ಆಧುನಿಕ ವಿಶ್ಲೇಷಣೆ ಮತ್ತು ತಾಂತ್ರಿಕ ಸಾಮಥ್ರ್ಯಗಳನ್ನು ಸಂಯೋಜಿಸುವ ಗುರಿಯೊಂದಿಗೆ ನಾಗರಿಕರು ಮತ್ತು ಇಲಾಖಾ ಅಧಿಕಾರಿಗಳು ಭೂಶಿಕ ಮಾಹಿತಿಯೊಂದಿಗೆ ವ್ಯವಹಾರ ನಡೆಸಲು, ಎನ್ಒಸಿ ನೀಡಲು, ಸುಧಾರಿತ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಯಾವುದೇ ಬದಲಾವಣೆಯಾದರೂ ಮಾಹಿತಿಗಳು ಅಪ್ಡೇಟ್ ಆಗಬೇಕು. ಆಗ ಮಾತ್ರ ತಂತ್ರಾಂಶದ ಮೂಲಕ ನಾಗರಿಕರಿಗೆ ಅಗತ್ಯ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ.


ಕಾರ್ಯಾಗಾರದಲ್ಲಿ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳಾದ ಲಕ್ಷೋಜಿ ಮತ್ತು ಕರುಣಾಕರನ್ ಅವರು ಪಿಪಿಟಿ ಮೂಲಕ ಕೆಜಿಐಎಸ್ 2.0 ವ್ಯವಸ್ಥೆಯ ಬಗ್ಗೆ ವಿವರಿಸಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ತಾಂತ್ರಿಕ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post