ಚಾರಣಿಗರ ಸುರಕ್ಷತೆಗೆ ಅರಣ್ಯ ಇಲಾಖೆ ಕಠಿಣ ಎಸ್.ಒ.ಪಿ.: ನೇಚರ್ ಗೈಡ್ ಕಡ್ಡಾಯ, ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಶ್ವರ ಖಂಡ್ರೆ, “ಚಾರಣಿಗರ ಜೀವ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅಪ್ರಾಪ್ತ ವಯಸ್ಕರು, ಹಿರಿಯ ನಾಗರಿಕರು, ಹವ್ಯಾಸಿ ಚಾರಣಿಗರು ಸೇರಿದಂತೆ ಎಲ್ಲರೂ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು.
- ನೇಚರ್ ಗೈಡ್ ಕಡ್ಡಾಯ: ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಕ ಇರಬೇಕು.
- ಬ್ಯಾಚ್ ಮಿತಿ: ಒಂದು ಬ್ಯಾಚ್ನಲ್ಲಿ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ.
- ಆನ್‌ಲೈನ್ ನೋಂದಣಿ ಕಡ್ಡಾಯ: ಪ್ರತಿಯೊಬ್ಬ ಚಾರಣಿಗರು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.
- ಮೊಬೈಲ್ ಟ್ರ್ಯಾಕಿಂಗ್ ಆ್ಯಪ್: ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಅಳವಡಿಸಲಾಗುತ್ತದೆ.
- GPS ವಾಕಿ-ಟಾಕಿ: ನೇಚರ್ ಗೈಡ್‌ಗಳಿಗೆ ಜಿಪಿಎಸ್ ಹೊಂದಿದ ವಾಕಿ-ಟಾಕಿ ನೀಡಲಾಗುವುದು.
- ನಿಷೇಧಗಳು: ಶಬ್ದಕಾರಿ ಸಾಧನಗಳು, ಆಯುಧಗಳು, ಕ್ಯಾಂಪ್ ಫೈರ್ ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ.
- ಪೋಷಕರ ಅನುಮತಿ: ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ.
- ದೈಹಿಕ ಸಾಮರ್ಥ್ಯ ಪ್ರಮಾಣಪತ್ರ: ಹಿರಿಯ ನಾಗರಿಕರು ಕಡ್ಡಾಯವಾಗಿ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ಹೊಂದಿರಬೇಕು.
- ಪ್ರಥಮ ಚಿಕಿತ್ಸಾ ಕಿಟ್: ಪ್ರತಿ ಗುಂಪಿನಲ್ಲೂ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು.
“ಅರಣ್ಯ ವಿಹಾರ ತಾಣಗಳು ಮತ್ತು ಚಾರಣ ಪಥಗಳನ್ನು ಶೀಘ್ರದಲ್ಲೇ aranyavihaara.karnataka.gov.in ಪೋರ್ಟಲ್‌ನಲ್ಲಿ ಸೇರಿಸಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಅರ್ಧ ಗಂಟೆಗೆ ಗೈಡ್‌ಗಳು ಬೇಸ್ ಕ್ಯಾಂಪ್‌ನೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಚಾರಣಿಗರ ಸಂಖ್ಯೆಯನ್ನು ಪರಿಶೀಲಿಸಬೇಕು. ಚಾರಣಿಗರ ಸುರಕ್ಷತೆ, ಪ್ರಕೃತಿ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಆದ್ಯತೆ.”
ಹೊಸ ನಿಯಮಗಳ ಪ್ರಕಾರ, ಚಾರಣ ಪ್ರಾರಂಭಿಸುವ ಮುನ್ನ ಬೇಸ್ ಕ್ಯಾಂಪ್‌ನಲ್ಲಿ ಚಾರಣಿಗರಿಗೆ ಸುರಕ್ಷತಾ ಮಾರ್ಗಸೂಚಿಗಳ ಕುರಿತು ಪೂರ್ವಭಾವಿ ಮಾಹಿತಿ ನೀಡಲಾಗುತ್ತದೆ. ಚಾರಣದ ಅವಧಿಯಲ್ಲಿ ಗೈಡ್‌ಗಳು ಚಾರಣಿಗರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕು ಮತ್ತು ಪ್ರತಿ ಅರ್ಧ ಗಂಟೆಗೆ ಬೇಸ್ ಕ್ಯಾಂಪ್ ಜೊತೆ ಸಂಪರ್ಕದಲ್ಲಿರಬೇಕು. ದಾರಿ ತಪ್ಪಿದಾಗ ತಕ್ಷಣ ಪತ್ತೆಹಚ್ಚಲು ಜಿಪಿಎಸ್ ವ್ಯವಸ್ಥೆ ಸಹಕಾರಿಯಾಗಲಿದೆ.
ಈ ಎಸ್.ಒ.ಪಿ.ಯನ್ನು ರೂಪಿಸುವಲ್ಲಿ ಶ್ರಮಿಸಿದ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಪ್ರಕೃತಿ ಪ್ರಿಯರು, ಚಾರಣಿಗರು ಮತ್ತು ಪ್ರವಾಸೋದ್ಯಮ ಸಂಘಟನೆಗಳು ಹೊಸ ಮಾರ್ಗಸೂಚಿಗಳನ್ನು ಸ್ವಾಗತಿಸಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಮುಖ ಚಾರಣ ಪಥಗಳಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

Post a Comment