ಬಳ್ಳಾರಿ: ಡೆಲಿವರಿ ಏಜೆನ್ಸಿಗಳಿಗೆ ಪೊಲೀಸರ ಕಟ್ಟುನಿಟ್ಟಿನ ಸೂಚನೆ; ಸಿಸಿಟಿವಿ ಕಡ್ಡಾಯ, ಪೊಲೀಸ್ ವೆರಿಫಿಕೇಷನ್ ನಂತರವೇ ನೇಮಕಾತಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪೆನ್ನೇಕರ್, ಐ.ಪಿ.ಎಸ್. ರವರ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ನವೀನ್ ಕುಮಾರ್.ಎನ್ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು), ಎಂ. ಗೋವಿಂದ್ ರಾಜ್ (ಡಿ.ಎಸ್.ಪಿ, ಬಳ್ಳಾರಿ ನಗರ ಉಪ ವಿಭಾಗ) ಸೇರಿದಂತೆ ನಗರದ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್ಗಳು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
📋 ಸಂಸ್ಥೆಗಳಿಗೆ ನೀಡಲಾದ ಪ್ರಮುಖ ಸೂಚನೆಗಳು:
- ಸಿಸಿಟಿವಿ ಕಡ್ಡಾಯ: ವಸ್ತುಗಳ ದಾಸ್ತಾನು ಮತ್ತು ಪ್ಯಾಕಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು.
- ಬುಕ್ಕಿಂಗ್ ರಿಜಿಸ್ಟರ್ ನಿರ್ವಹಣೆ: ಎಲ್ಲ ವಹಿವಾಟುಗಳ ದಾಖಲೆ ಕಡ್ಡಾಯವಾಗಿ ಇಡಬೇಕು.
- ಲೈಸೆನ್ಸ್ ಕಡ್ಡಾಯ: ಸಂಸ್ಥೆಗಳು ಕಡ್ಡಾಯವಾಗಿ ಸೂಕ್ತ ಲೈಸೆನ್ಸ್ ಹೊಂದಿರಬೇಕು.
- ಡೆಲಿವರಿ ಬಾಯ್ಸ್ ನೊಂದಣಿ: ಪ್ರತಿಯೊಬ್ಬ ಡೆಲಿವರಿ ಬಾಯ್‌ನ ನೋಂದಣಿ ಕಡ್ಡಾಯ.
- ಚಾಲನಾ ಲೈಸನ್ಸ್ ಇರುವವರನ್ನು ಮಾತ್ರ ನೇಮಕಾತಿ: ವಾಹನ ಚಾಲನಾ ಪರವಾನಿಗೆ ಹೊಂದಿದವರನ್ನು ಮಾತ್ರ ನೇಮಿಸಿಕೊಳ್ಳಬೇಕು.
- ಆಧಾರ್, ಪಾನ್ ಕಾರ್ಡ್ ಸಂಗ್ರಹ: ನೇಮಕಾತಿ ಪೂರ್ವದಲ್ಲಿ ಕಡ್ಡಾಯವಾಗಿ ದಾಖಲೆಗಳನ್ನು ಪಡೆಯಬೇಕು.
- ಪೊಲೀಸ್ ವೆರಿಫಿಕೇಶನ್ ಕಡ್ಡಾಯ: ಡೆಲಿವರಿ ಬಾಯ್ಸ್‌ಗಳ ಕುರಿತು ಪೊಲೀಸ್ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ವೆರಿಫಿಕೇಶನ್ ವರದಿ ಬಂದ ನಂತರವೇ ನೇಮಕಾತಿ ಮಾಡಿಕೊಳ್ಳಬೇಕು.
- ಸಂಪೂರ್ಣ ಮಾಹಿತಿ ಸಲ್ಲಿಕೆ: ಡೆಲಿವರಿ ಬಾಯ್ಸ್ ಮತ್ತು ಕಚೇರಿ ಸಿಬ್ಬಂದಿಯ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಛೇರಿಗೆ ಸಲ್ಲಿಸಬೇಕು.
⚠️ ಮಾದಕ ವಸ್ತು ಸಾಗಾಣಿಕೆ ತಡೆಗೆ ನಿಗಾ
ಸಭೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯಲಾದ ಅಂಶವೆಂದರೆ, ಕೆಲವು ಡೆಲಿವರಿ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಡರ್ ಮಾಡಿದ ವಸ್ತುಗಳ ಜೊತೆಯಲ್ಲಿಯೇ ಮಾದಕ ವಸ್ತುಗಳನ್ನು ತಲುಪಿಸಲಾಗುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ, ವಿಳಂಬವಾಗಿ ವಸ್ತುಗಳನ್ನು ತಲುಪಿಸುವ ಡೆಲಿವರಿ ಬಾಯ್ಸ್‌ಗಳ ಮಾಹಿತಿಯನ್ನು ಜಿಲ್ಲಾ ಪೊಲೀಸ್ ಕಛೇರಿಗೆ ಸಲ್ಲಿಸಬೇಕು. ಡೆಲಿವರಿ ಪಾರ್ಸಲ್‌ಗಳನ್ನು ತಲುಪಿಸುವ ಸಂದರ್ಭದಲ್ಲಿ ವಸ್ತುಗಳ ಬಗ್ಗೆ ಅನುಮಾನ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಯಿತು.
ಈ ಸಭೆಯಲ್ಲಿ ಪೋಸ್ಟಲ್ ಡಿಪಾರ್ಟ್ಮೆಂಟ್, ಆರ್.ಪಿ.ಎಫ್ & ರೈಲ್ವೆ ಪೊಲೀಸ್, ಬ್ಲಿಂಕ್ ಇಟ್, ಡೊಮಿನೋಸ್, ಅಮೇಜಾನ್, ಜೊಮಾಟೊ, ಸ್ವಿಗ್ಗಿ, ಬ್ಲೂ ಡಾರ್ಟ್, ಕೆಎಫ್‌ಸಿ, ಈಗಲ್, ಡಿಟಿಡಿಸಿ ಕೊರಿಯರ್, ಪ್ರೊಫೆಷನಲ್ ಕೊರಿಯರ್, ಲಾರಿ ಯೂನಿಯನ್, ಕುಕ್ಕೆ ಟೂರ್ಸ್, ಸಂಜನಾ ಟ್ರಾವೆಲ್ಸ್, ಪೂಜಾ ಟ್ರಾವೆಲ್ಸ್, ಬಾಲಾಜಿ ಟ್ರಾವೆಲ್ಸ್, ವಿಆರ್‌ಎಲ್, ಪೋಸ್ಟ್ ಆಫೀಸ್, ಐಆರ್ಐ ಟ್ರಾನ್ಸ್‌ಪೋರ್ಟ್, ಗಣೇಶ್ ಟ್ರಾನ್ಸ್‌ಪೋರ್ಟ್ ಸೇರಿದಂತೆ ಹಲವು ಸಂಸ್ಥೆಗಳ ಡೆಲಿವರಿ ಬಾಯ್ಸ್ ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಡೆಲಿವರಿ ಸಮಯದಲ್ಲಿ ಮಾದಕ ವಸ್ತುಗಳು ಮತ್ತು ಇತರ ನಿಷೇಧಿತ ವಸ್ತುಗಳ ಸಾಗಾಣಿಕೆ ತಡೆಯುವುದು, ಪ್ರತಿನಿತ್ಯದ ಚಟುವಟಿಕೆಗಳ ಮೇಲೆ ನಿಗಾವಣೆ ಇಡುವುದು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸರು ನೀಡಿದ ಸೂಚನೆಗಳನ್ನು ಎಲ್ಲ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದರು.

Post a Comment