ವಿಜಯಪುರ, ಮಾರ್ಚ್ 31: ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ಎಂದರೆ ಸುಡು ಬಿಸಿಲು, ಕುಡಿಯುವ ನೀರಿನ ಹಾಹಾಕಾರ, ಕೃಷಿಯಲ್ಲಿ ಸತತ ನಷ್ಟಕ್ಕೆ ಹೆಸರಾಗಿತ್ತು. ಆದರೆ ನೀರಾವರಿ ಕ್ರಾಂತಿಯ ಫಲವಾಗಿ ಇಂದು ಈ ಭೂಮಿ ಯಶೋಗಾಥೆಗಳನ್ನು ಬರೆಯುತ್ತಿದೆ. ಅಂತಹದ್ದೇ ಸಾಧನೆ ಮಾಡಿದ್ದಾರೆ ಬಬಲೇಶ್ವರದ ಪ್ರಗತಿಪರ ರೈತರಾದ ಧರ್ಮಣ್ಣ ಬೀಳೂರ.
ಸುಡು ಬಿಸಿಲಿನಲ್ಲೂ ಕೃಷಿ ಯಶಸ್ವಿಯಾಗಬಹುದು ಎಂಬುದಕ್ಕೆ ಅವರ ತೋಟವೇ ಸಾಕ್ಷಿ. ತಮ್ಮ 20 ಎಕರೆ ತೋಟದಲ್ಲಿ 8 ಎಕರೆಗಳಲ್ಲಿ ದ್ರಾಕ್ಷಿ ಬೆಳೆದಿದ್ದು, ಉಳಿದ 12 ಎಕರೆಗಳಲ್ಲಿ ದ್ರಾಕ್ಷಿಯನ್ನು ಒಣಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿ ಬಂಪರ್ ಬೆಳೆ ಬಂದಿದ್ದು, ಸ್ಥಳೀಯ ಮಾರುಕಟ್ಟೆಯ ಜೊತೆಗೆ ಮಲೇಶ್ಯಾಕ್ಕೂ ರಫ್ತು ಮಾಡಲು ಸಿದ್ಧತೆ ನಡೆಸಿದ್ದಾರೆ. ಅವರ ಈ ಬಾರಿಯ ಲಾಭದ ನಿರೀಕ್ಷೆ ಸುಮಾರು ₹1 ಕೋಟಿ 80 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಯಶಸ್ಸಿನ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ. ಪಾಟೀಲ್ ಅವರು ಕೈಗೊಂಡ ಕೆರೆ ತುಂಬುವ ಯೋಜನೆಗಳು, ಬಾವಿ-ಬಾವಡಿಗಳ ಪುನಶ್ಚೇತನ, ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಅನುಷ್ಠಾನಗೊಳಿಸಿದ ಹಲವಾರು ಯೋಜನೆಗಳೇ ಕಾರಣ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಧರ್ಮಣ್ಣ ಅವರು ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಯಶಸ್ವೀ ತೋಟಗಾರಿಕೆಯ ಕುರಿತು ಮಾಹಿತಿ ನೀಡಿದರು. ಅವರು ತಾವು ಬೆಳೆದ ದ್ರಾಕ್ಷಿ ಹಣ್ಣುಗಳನ್ನು ಸಚಿವರಿಗೆ ಕಾಣಿಕೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, “ನೀರಾವರಿ ಕ್ರಾಂತಿಯ ಫಲಶೃತಿ ಇಂದು ನಮ್ಮ ರೈತರ ಬದುಕಿನಲ್ಲಿ ಕಾಣಸಿಗುತ್ತಿದೆ. ಧರ್ಮಣ್ಣ ಅವರ ಯಶೋಗಾಥೆ ಉಳಿದ ರೈತರಿಗೆ ಪ್ರೇರಣೆಯಾಗಲಿ. ಬಸವನಾಡು ಸದಾ ಸುಭಿಕ್ಷವಾಗಲಿ” ಎಂದು ಹಾರೈಸಿದರು.
ಧರ್ಮಣ್ಣ ಬೀಳೂರ ಅವರ ತೋಟಗಾರಿಕೆ ಇನ್ನಷ್ಟು ಯಶಸ್ವಿಯಾಗಲಿ ಎಂಬ ಹಾರೈಕೆಯನ್ನು ಸಚಿವರು ವ್ಯಕ್ತಪಡಿಸಿದರು.

Post a Comment