ಮೈಸೂರು, ಮಾರ್ಚ್ 31: ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಉಪಕರಣಗಳ ಘಟಕ ಮತ್ತು ತಾಯಿ ಎದೆ ಹಾಲಿನ ಬ್ಯಾಂಕ್ ಅನ್ನು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೂ, ಮಳವಳ್ಳಿ ಶಾಸಕರೂ ಆದ ಪಿ.ಎಂ. ನರೇಂದ್ರ ಸ್ವಾಮಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಗಣ್ಯರು, ಹಿರಿಯ ಅಧಿಕಾರಿಗಳು ಹಾಜರಿದ್ದರು.
ನವಜಾತ ಶಿಶುಗಳ ಆರೋಗ್ಯ ಮತ್ತು ತಾಯಂದಿರ ಸೇವೆಗೆ ಮೀಸಲಾಗಿ ಸ್ಥಾಪಿಸಲಾಗಿರುವ ತಾಯಿ ಎದೆ ಹಾಲಿನ ಬ್ಯಾಂಕ್, ಅಗತ್ಯವಿರುವ ಶಿಶುಗಳಿಗೆ ಸುರಕ್ಷಿತವಾಗಿ ಎದೆ ಹಾಲು ಲಭ್ಯವಾಗುವಂತೆ ಮಾಡುವ ಮಹತ್ವದ ಕೇಂದ್ರವಾಗಿದೆ. ಜೊತೆಗೆ ಅತ್ಯಾಧುನಿಕ ಉಪಕರಣಗಳ ಘಟಕವು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.
ಪರಮಪೂಜ್ಯ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಆಶೀರ್ವಚನ ನೀಡಿ, ತಾಯಿ ಮತ್ತು ಶಿಶು ಆರೋಗ್ಯ ಕ್ಷೇತ್ರದಲ್ಲಿ ಜೆಎಸ್ಎಸ್ ಆಸ್ಪತ್ರೆ ನೀಡುತ್ತಿರುವ ಸೇವೆ ಶ್ಲಾಘನೀಯ ಎಂದು ಹೇಳಿದರು. ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ನವೀನ ಸೌಲಭ್ಯಗಳು ವಿಸ್ತರಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಯ ನಿರ್ದೇಶಕರು, ವೈದ್ಯರು, ಆಡಳಿತ ಮಂಡಳಿಯ ಸದಸ್ಯರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

Post a Comment