Top News

35 ಸಾವಿರ ಲಂಚದ ಹಣ ಬಿಸಾಕಿ ಎಸ್ಕೇಪ್; ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರದ ಸಹಾಯಕ ಡ್ರಗ್ ಕಂಟ್ರೋಲರ್!

ಕೋಲಾರ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಲೋಕಾಯುಕ್ತ ಅಧಿಕಾರಿಗಳನ್ನು ಕಂಡ ಕೂಡಲೇ ಲಂಚದ ಹಣವನ್ನು ರಸ್ತೆಮಧ್ಯದಲ್ಲಿ ಬಿಸಾಕಿ ಪರಾರಿಯಾಗಿದ್ದ ಆಹಾರ ಮತ್ತು ಔಷಧ ನಿಯಂತ್ರಣ (ಎಫ್ಡಿಸಿ) ಅಧಿಕಾರಿ ಶ್ಯಾಮಲಾ ಮತ್ತು ಇಬ್ಬರು ಸಹಚರರು ಅಂತಿಮವಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಫ್ಡಿಸಿ ಅಧಿಕಾರಿ ಶ್ಯಾಮಲಾ, ನಿವೃತ್ತ ಡಿ ಗ್ರೂಪ್ ನೌಕರ ಶ್ರೀನಿವಾಸ್ ಮತ್ತು ಚಾಲಕ ಮಹಂತೇಶ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಲಿತ ಮುಖಂಡ ಹೂಹಳ್ಳಿ ಪ್ರಕಾಶ್ ಮತ್ತು ಕೃಷ್ಣಯ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯ ವಿವರ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕಾಗಿ ಶ್ಯಾಮಲಾ ಮತ್ತವರ ಸಹಚರರು 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ, ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದ ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಅವರನ್ನು ಹಿಂಬಾಲಿಸಿದ್ದು, ಈ ವೇಳೆ ರಸ್ತೆ ಮಧ್ಯದಲ್ಲೇ 35 ಸಾವಿರ ರೂ. ಲಂಚದ ಹಣವನ್ನು ಬಿಸಾಕಿ ಪರಾರಿಯಾಗಲು ಯತ್ನಿಸಿದ್ದಾರೆ. ತಡರಾತ್ರಿಯವರೆಗೂ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆ ಹಣಕ್ಕಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಬಂಧನ: ಲಂಚದ ಹಣ ಪತ್ತೆಯಾಗದಿದ್ದರೂ, ಹಣ ಸ್ವೀಕರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆಯೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಮೂವರು ಆರೋಪಿಗಳು ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಿಂದ ಕೋಲಾರದ ಮೆಡಿಕಲ್ ಸ್ಟೋರ್ ಮಾಲೀಕರು ಮತ್ತು ಸಾರ್ವಜನಿಕರಲ್ಲಿ ತೃಪ್ತಿ ವ್ಯಕ್ತವಾಗಿದ್ದು, ಭ್ರಷ್ಟಾಚಾರ ವಿರುದ್ಧ ಇಂತಹ ಕಾರ್ಯಾಚರಣೆ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.

Post a Comment

Previous Post Next Post