Top News

ಕೋಲಾರದ ಕ್ಯಾಲನೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸಮಸ್ಯೆ ತೀವ್ರ; ಯುಗಾದಿ ಹಬ್ಬದಲ್ಲೂ ಗ್ಯಾಸ್ ಇಲ್ಲದೆ ಪರದಾಟ

ಕೋಲಾರ: ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಸುಮಾರು ಒಂದು ವಾರದಿಂದ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ತೀವ್ರ ಬವಣೆ ಅನುಭವಿಸುತ್ತಿದ್ದಾರೆ. ಹಬ್ಬದ ಹೊತ್ತಿನಲ್ಲಿ ಅಡುಗೆ ಅನಿಲ ಇಲ್ಲದೆ ಗ್ರಾಮಸ್ಥರು ಒಲೆ ಉರಿಸಲು ಪರದಾಡುವಂತಾಗಿದೆ. ಗ್ರಾಮಸ್ಥರು ಸಿಲಿಂಡರ್ ಬುಕ್ ಮಾಡಿ ವಾರ ಕಳೆದರೂ ಪೂರೈಕೆಯಾಗಿಲ್ಲ. ಈ ಬಗ್ಗೆ ಸ್ಥಳೀಯ ಗ್ಯಾಸ್ ಏಜೆನ್ಸಿ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, "ಗುರುವಾರ ಬೆಳಗ್ಗೆ ಸಿಲಿಂಡರ್ ತಲುಪಿಸುವುದಾಗಿ" ಭರವಸೆ ನೀಡಲಾಗಿತ್ತು. ಆದರೆ ಭರವಸೆಯಂತೆ ಗುರುವಾರ ಬೆಳಗ್ಗೆ ನಾಲ್ಕು ಗಂಟೆಯಾದರೂ ಸಿಲಿಂಡರ್ ತಲುಪಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಪರದಾಟ ಹಬ್ಬದ ಹೊತ್ತಿನಲ್ಲೂ ಗ್ಯಾಸ್ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು, ಹೊರಗಿನ ಹೋಟೆಲ್ಗಳ ಮೊರೆ ಹೋಗುವಂತಾಗಿದೆ. "ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆಗೆ ಬರುವ ಅತಿಥಿಗಳಿಗೆ ಊಟ ಮಾಡಿಸಲೂ ಪರದಾಡುವಂತಾಗಿದೆ. ವಾರದಿಂದ ಸಿಲಿಂಡರ್ ಬುಕ್ ಮಾಡಿದ್ದೇವೆ, ಪ್ರತಿದಿನ ಏಜೆನ್ಸಿಗೆ ಫೋನ್ ಮಾಡಿದರೆ 'ಬರುತ್ತದೆ ಬರುತ್ತದೆ' ಅಂತ ಹೇಳ್ತಾರೆ ಆದ್ರೆ ಇನ್ನೂ ಬಂದಿಲ್ಲ" ಎಂದು ಗ್ರಾಮದ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಆರೋಪ ಏನು? ಸ್ಥಳೀಯ ಗ್ಯಾಸ್ ಏಜೆನ್ಸಿಯವರು ಕೆಲವು ಆಯ್ದ ಗ್ರಾಮಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. "ಪಟ್ಟಣ ಪ್ರದೇಶಕ್ಕೆ ನಿತ್ಯ ಸಿಲಿಂಡರ್ ಸಪ್ಲೈ ಆಗ್ತಿದೆ. ಆದ್ರೆ ನಮ್ಮಂಥ ಗ್ರಾಮೀಣ ಪ್ರದೇಶಕ್ಕೆ ಮಾತ್ರ ವಾರ ಕಳೆದ್ರೂ ಸರಬರಾಜು ಆಗ್ತಿಲ್ಲ. ಇದು ಸರಿಯೇ?" ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಆಡಳಿತಕ್ಕೆ ದೂರು ನೀಡಿದರೂ ಸ್ಪಂದನೆ ಇಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹಬ್ಬದ ದಿನದಂದು ಗ್ಯಾಸ್ ಇಲ್ಲದೆ ಪರದಾಡುತ್ತಿರುವ ಕ್ಯಾಲನೂರು ಗ್ರಾಮಸ್ಥರ ಸಮಸ್ಯೆ ಆಲಿಸುವವರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದೆ.

 ವರದಿ: ರಮೇಶ್ +919731961319

Post a Comment

Previous Post Next Post