ಚಾಮರಾಜನಗರ:
ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಭಕ್ತಿಭಾವದಿಂದ ಮತ್ತು ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಇಂದು ನಡೆದ ರಥೋತ್ಸವದ ಮೂಲಕ ಭಕ್ತರು ಭಾವಪೂರ್ಣವಾಗಿ ತೆರೆ ಎಳೆದರು.
ರಾಜ್ಯದೆಲ್ಲೆಡೆಯಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು ಭಾಗದಿಂದಲೂ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರ ಜಯಘೋಷ, ಭಜನೆಗಳು ಮತ್ತು ಪೂಜಾ ವಿಧಿಗಳು ಕ್ಷೇತ್ರದ ಸುತ್ತಮುತ್ತ ಧಾರ್ಮಿಕ ವಾತಾವರಣವನ್ನು ನಿರ್ಮಿಸಿತು.
ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತವು ಸಮರ್ಪಕ ಕ್ರಮಗಳನ್ನು ಕೈಗೊಂಡಿದ್ದು, ಕುಡಿಯುವ ನೀರು, ಶೌಚಾಲಯ ಮತ್ತು ದಾಸೋಹ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಒದಗಿಸಿತ್ತು. ಯಾವುದೇ ಅಸೌಕರ್ಯ ಉಂಟಾಗದಂತೆ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾವಹಿಸಿದ್ದರು.
ಇದೇ ವೇಳೆ, ಯುಗಾದಿ ಹಬ್ಬದ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಹೊನ್ನೇರು ಕಟ್ಟುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಎತ್ತುಗಳು ಹಾಗೂ ಎತ್ತಿನ ಬಂಡಿಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿದ ರೈತರು, ಸಂವತ್ಸರದ ಮೊದಲ ದಿನವೇ ಹೊಲಗಳಿಗೆ ಇಳಿದು ಉತ್ತಮ ಮಳೆ ಮತ್ತು ಸಮೃದ್ಧ ಬೆಳೆಯಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಒಟ್ಟಿನಲ್ಲಿ, ಧಾರ್ಮಿಕ ಹಾಗೂ ಕೃಷಿ ಸಂಸ್ಕೃತಿಯ ಸಂಭ್ರಮ ಒಂದೇ ದಿನದಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯಾದ್ಯಂತ ಉತ್ಸಾಹಭರಿತ ವಾತಾವರಣ ಕಂಡುಬಂತು.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ
Y.K.Varaprasad
0

Post a Comment