Top News

ಚಿಂತಾಮಣಿ: ಕಾಗತಿ ಗ್ರಾಮದ ಐತಿಹಾಸಿಕ ಕಲ್ಯಾಣಿಯಲ್ಲಿ ಸ್ವಚ್ಛತಾ ಶ್ರಮದಾನ; ಜನಸಹಕಾರದೊಂದಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನೆ


 ಚಿಕ್ಕಬಳ್ಳಾಪುರ, ಮಾರ್ಚ್ 23: ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುರಾತನ ಐತಿಹಾಸಿಕ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರದ ಮುಖ್ಯ ಯೋಜನಾಧಿಕಾರಿ ಶ್ರೀಮತಿ ನಿರ್ಮಲ ಅವರು ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದರು. ಅವರು ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಶ್ರಮದಾನದಲ್ಲಿ ಭಾಗಿಯಾಗಿ ಕಲ್ಯಾಣಿ ಶುದ್ಧೀಕರಣ ಕಾರ್ಯವನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಗೌರಿಬಿದನೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು, ಎಲ್ಲಾ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು, ನರೇಗಾ ಸಿಬ್ಬಂದಿ, ಎನ್ಆರ್ಎಲ್ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಕರವಸೂಲಿಗಾರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸ್ಪಂದನೆ ನೀಡಿದ್ದಾರೆ. ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಶ್ರಮದಾನದಲ್ಲಿ ಭಾಗವಹಿಸಿ, ಕಲ್ಯಾಣಿಯಲ್ಲಿದ್ದ ಹೂಳು, ಕಸಕಡ್ಡಿಗಳನ್ನು ತೆರವುಗೊಳಿಸಲು ಸಹಕರಿಸಿದರು. ಈ ಮೂಲಕ ಐತಿಹಾಸಿಕ ಕಲ್ಯಾಣಿಯ ಸಂರಕ್ಷಣೆಗೆ ಅಗತ್ಯವಿರುವ ಸಹಕಾರವನ್ನು ಸಾರ್ವಜನಿಕರು ನೀಡಿದ್ದಾರೆ.


ಜಿಲ್ಲಾ ಪಂಚಾಯತ್ ವತಿಯಿಂದ ಪ್ರಾರಂಭಗೊಂಡಿರುವ ಈ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರು ಮತ್ತು ಸಂಘಟನೆಗಳು ನೀಡುತ್ತಿರುವ ಸಹಕಾರವು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ಎಲ್ಲಾ ಐತಿಹಾಸಿಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post