Top News

ಗೌರಿಬಿದನೂರು: ವಾಟದಹೊಸಹಳ್ಳಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಕಲ್ಯಾಣಿ ಸ್ವಚ್ಛತೆಗೆ ವಿಶೇಷ ಶ್ರಮದಾನ


 ಚಿಕ್ಕಬಳ್ಳಾಪುರ, ಮಾರ್ಚ್ 23: ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿನ ಪುರಾತನ ಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.


ಜಿಲ್ಲಾ ಪಂಚಾಯತ್ ನಿರ್ದೇಶನದಂತೆ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿರುವ ಈ ವಿಶೇಷ ಸ್ವಚ್ಛತಾ ಕಾರ್ಯದ ಮೊದಲ ಹಂತವಾಗಿ ಇಂದು ವಾಟದಹೊಸಹಳ್ಳಿ ಗ್ರಾಮದಲ್ಲಿ ಶ್ರಮದಾನ ನಡೆಸಲಾಯಿತು.


ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಸ್ಥಳೀಯರು ಸೇರಿದಂತೆ ಎಲ್ಲಾ ವಿಭಾಗದವರು ಒಗ್ಗಟ್ಟಾಗಿ ಶ್ರಮಿಸಿ ಕಲ್ಯಾಣಿ ಆವರಣವನ್ನು ಸ್ವಚ್ಛಗೊಳಿಸಿದರು. ಕಲ್ಯಾಣಿಯಲ್ಲಿದ್ದ ಹೂಳು, ಕಸಕಡ್ಡಿಗಳನ್ನು ತೆರವುಗೊಳಿಸಿ ನೀರು ಸಂಗ್ರಹಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲಾಯಿತು.


ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಮತ್ತು ಎನ್ಆರ್ಎಲ್ಎಂ ಸಿಬ್ಬಂದಿ, ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.


ಜಿಲ್ಲಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಕಲ್ಯಾಣಿಗಳು, ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವ ಈ ವಿಶೇಷ ಅಭಿಯಾನವನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post