ಮಕ್ಕಳಲ್ಲಿ ಸಂಸ್ಕಾರ ಮತ್ತು ಸ್ಫೂರ್ತಿ ಮೂಡಿಸುವ ಸಲುವಾಗಿ
ಮಂಗಳೂರು, ಮಾರ್ಚ್ 21: ಶೃಂಗೇರಿ ಶಾರದಾ ಮಠದ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಬಾಲಭಾರತಿ’ ಸಂಸ್ಥೆಯು ಬೇಸಿಗೆ ರಜೆಯನ್ನು ಮಕ್ಕಳಿಗೆ ಅರ್ಥಪೂರ್ಣವಾಗಿ ಮಾಡಿಕೊಡುವ ಸದುದ್ದೇಶದಿಂದ ‘ಶ್ರೀರಾಮನೊಂದಿಗೆ ಬೇಸಿಗೆ’ (A Summer with Sri Rama) ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಮಕ್ಕಳಿಗೆ ಕಲಿಕೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಒದಗಿಸುವ ಒಂದು ನವೀನ ಉಪಕ್ರಮವಾಗಿದೆ.
ಈ ಕಾರ್ಯಕ್ರಮವು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜೊತೆಗೆ, ಅವರ ಬೌದ್ಧಿಕ ಕುತೂಹಲವನ್ನು ಹೆಚ್ಚಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಲಿಕೆಯ ಜೊತೆಗೆ ಸ್ಪರ್ಧಾತ್ಮಕ ಅಂಶವನ್ನೂ ಒಳಗೊಂಡಿರುವ ಈ ಯೋಜನೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನಗಳು ಮತ್ತು ಶೃಂಗೇರಿ ಕ್ಷೇತ್ರದ ಪ್ರಾಯೋಜಿತ ಪ್ರವಾಸದ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ‘ಬಾಲಭಾರತಿ’ ಸಂಸ್ಥೆಯ ಈ ಬಾರಿಯ ಬೇಸಿಗೆ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವ ಮೂಲಕ ತಮ್ಮ ರಜೆಯನ್ನು ಸ್ಮರಣೀಯವಾಗಿಸಿಕೊಳ್ಳಬಹುದಾಗಿದೆ.
ಈ ಉದಾತ್ತ ಉಪಕ್ರಮದ ಭಾಗವಾಗಲು ಮಕ್ಕಳನ್ನು ಪ್ರೋತ್ಸಾಹಿಸುವಂತೆ ಸಂಸ್ಥೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ baalabharati.org ಎಂಬ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.

Post a Comment