ಶಿಡ್ಲಘಟ್ಟ, ಮಾರ್ಚ್ 14:
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎನ್. ರವಿಕುಮಾರ್ ಅವರು ನಿನ್ನೆ ಶಿಡ್ಲಘಟ್ಟ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗುತ್ತಿರುವ ನಗರಸಭೆಯ ನೂತನ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದರು.
ಸುಮಾರು ₹2.36 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡದ ಕಾಮಗಾರಿಯ ಪ್ರಗತಿಯನ್ನು ಶಾಸಕರು ಪರಿಶೀಲಿಸಿ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು. ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಕಟ್ಟಡ ನಿರ್ಮಾಣದ ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಸಲಾಯಿತು.
ಶಾಸಕರು ಮಾತನಾಡಿ, ನಗರದ ಆಡಳಿತ ವ್ಯವಸ್ಥೆ ಸುಧಾರಿಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಈ ನೂತನ ನಗರಸಭಾ ಕಟ್ಟಡವು ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಈ ಯೋಜನೆ ಪೂರ್ಣಗೊಂಡ ಬಳಿಕ ಶಿಡ್ಲಘಟ್ಟ ನಗರದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Post a Comment