Top News

ಬೆಳ್ತಂಗಡಿ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ವಿರುದ್ಧ ಪಂಚಾಯತ್ ಲೆಟರ್ಹೆಡ್, ಪಿಡಿಒ ಸಹಿ ಪೋರ್ಜರಿ ಆರೋಪ; ಪೊಲೀಸ್ ಪ್ರಕರಣ ದಾಖಲು



 ಬೆಳ್ತಂಗಡಿ, ಮಾರ್ಚ್ 23: ಪಂಚಾಯತ್ನ ಲೆಟರ್ಹೆಡ್, ಅಭಿವೃದ್ಧಿ ಅಧಿಕಾರಿಯ ಸಹಿ ಮತ್ತು ಮೊಹರು ನಕಲಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೀಡಿದ ದೂರಿನ ಆಧಾರದ ಮೇರೆಗೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ದೂರಿನ ವಿವರದ ಪ್ರಕಾರ, ಎಕ್ಸೆಲ್ ಶಿಕ್ಷಣ ಸಂಸ್ಥೆಯು (ಎಕ್ಸೆಲ್ ಪಿ.ಯು ಕಾಲೇಜ್) ಕರ್ನಾಟಕ ಸರ್ಕಾರದ ಲಾಂಛನ, ಗ್ರಾಮ ಪಂಚಾಯತಿ ಕುವೆಟ್ಟು ಅಧಿಕೃತ ಲೆಟರ್ಹೆಡ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಸಹಿ ಮತ್ತು ಮೊಹರು ಬಳಸಿ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ದಿನಾಂಕ: 19-04-2025ರಂದು ಗ್ರಾಮ ಪಂಚಾಯತಿ ಕುವೆಟ್ಟು ಇಲಿ ಸಿದ್ಧಪಡಿಸಿದ ವರದಿ ಮತ್ತು ಅದರ ಅನುಬಂಧ-2 ರಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದರಿ ದಾಖಲೆಗಳಲ್ಲಿ ಮಳೆನೀರು ಕೊಯ್ಲು (RWH) ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕ (STP) ಅಳವಡಿಕೆ ಸಂಬಂಧಿತ ಪ್ರಮಾಣಪತ್ರಗಳಿರುವುದು ವೇದ್ಯವಾಗಿದೆ.


ಮೇಲ್ನೋಟಕ್ಕೆ ಸರ್ಕಾರಿ ದಾಖಲೆಗಳಂತೆ ಕಂಡುಬಂದ ಈ ಪ್ರಮಾಣಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ಅವು ಸಂಪೂರ್ಣ ನಕಲಿ ಎಂದು ಪತ್ತೆಯಾಗಿದೆ. ಪಂಚಾಯತ್ನ ಲೆಟರ್ಹೆಡ್, ಸರ್ಕಾರಿ ಲಾಂಛನ ಹಾಗೂ ಪಿಡಿಒ ಅವರ ಸಹಿ ಮತ್ತು ಮೊಹರುಗಳನ್ನು ಅಕ್ರಮವಾಗಿ ಬಳಸಿಕೊಂಡು ಈ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶಿಕ್ಷಣ ಸಂಸ್ಥೆಯೊಂದು ಸರ್ಕಾರಿ ದಾಖಲೆಗಳನ್ನು ನಕಲಿ ಮಾಡಿರುವ ಘಟನೆ ಸ್ಥಳೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.

Post a Comment

Previous Post Next Post