ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಆತ್ಮಹತ್ಯೆ: ಸಾವಿಗೂ ಮುನ್ನ ವಿಡಿಯೋ ಡೆತ್ ನೋಟ್, ಮೇಲಾಧಿಕಾರಿ ಕಿರುಕುಳ ಆರೋಪ
ಪಾವಗಡದ ಕಚೇರಿಯಲ್ಲೇ ನೇಣಿಗೆ ಶರಣಾದ ಅಧಿಕಾರಿ; ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಬೇಕಿತ್ತು
ಪಾವಗಡ (ತುಮಕೂರು ಜಿಲ್ಲೆ), ಮಾರ್ಚ್ 21: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ (59) ಅವರು ಶುಕ್ರವಾರ ಸಂಜೆ ತಮ್ಮ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಮಾಡಿದ ವಿಡಿಯೋ ಡೆತ್ ನೋಟ್ನಲ್ಲಿ ಮೇಲಾಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಬೇಕಿದ್ದ ಹಿರಿಯ ಅಧಿಕಾರಿಯ ಆತ್ಮಹತ್ಯೆ ಸ್ಥಳೀಯವಾಗಿ ಸಂಚಲನ ಸೃಷ್ಟಿಸಿದೆ.
ಪಾವಗಡ ಪಟ್ಟಣದ ಆಪ್ ಬಂಡೆ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿಯೇ ಮಲ್ಲಿಕಾರ್ಜುನ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮೂಲತಃ ಪಾವಗಡ ತಾಲ್ಲೂಕಿನ ಗುಂಡರ್ಲಾಹಳ್ಳಿ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷಗಳಿಂದ ಪಾವಗಡದಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿಡಿಯೋದಲ್ಲಿ ಏನಿದೆ?
ಸಾವಿಗೂ ಮುನ್ನ ಮಲ್ಲಿಕಾರ್ಜುನ್ ಅವರು ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಅವರು, “ನಮ್ಮ ತಾಯಿ, ಹೆಂಡತಿ, ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಅವರಿಗೆ ಇನ್ನಷ್ಟು ಸಹಾಯ ಮಾಡಬೇಕಿತ್ತು ಆದರೆ ಅದು ಸಾಧ್ಯವಾಗುತ್ತಿಲ್ಲ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆಯಾಗಿರುವುದರಿಂದ ನಮ್ಮ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅಗತ್ಯವಿಲ್ಲ. ಅವನಿಗೆ ದೇವರು ಮತ್ತು ಕಾನೂನು ಶಿಕ್ಷೆ ಕೊಡಲಿ” ಎಂದು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ತಾಯಿಯ ಆಕ್ರಂದನ
ಮಗನ ಹೆಣದ ಮುಂದೆ ವೃದ್ಧ ತಾಯಿಯ ಆಕ್ರಂದನ ಮುಗಿಲು ಮುಟ್ಟಿತು. ನಿವೃತ್ತಿಗೆ ಕೆಲವೇ ದಿನಗಳ ಮುನ್ನ ಮಗನನ್ನು ಕಳೆದುಕೊಂಡ ತಾಯಿಯ ದುಃಖಕ್ಕೆ ಪರಿಸರ ಕರಗಿತು. ಮಲ್ಲಿಕಾರ್ಜುನ್ ಅವರ ಕುಟುಂಬದಲ್ಲಿ ಪತ್ನಿ, ಮಕ್ಕಳು ಸೇರಿದಂತೆ ಹಲವರು ಅಗಲಿಕೆಯ ಆಘಾತದಲ್ಲಿದ್ದಾರೆ.
ಪೊಲೀಸ್ ಭೇಟಿ ಮತ್ತು ತನಿಖೆ
ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಡಿಯೋ ಡೆತ್ ನೋಟ್ ಮತ್ತು ಇತರ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧದ ಆರೋಪಗಳ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಲ್ಲಿಕಾರ್ಜುನ್ ಅವರ ಆತ್ಮಹತ್ಯೆ ಸರ್ಕಾರಿ ಇಲಾಖೆಯಲ್ಲಿ ಮೇಲಧಿಕಾರಿಗಳ ಕಿರುಕುಳದ ಬಗ್ಗೆ ಗಂಭೀರ ಚರ್ಚೆಗೆ ವಿಷಯವಾಗಿದೆ.
Post a Comment