Top News

ವಿದ್ಯಾವಿಕಾಸ’ ಯೋಜನೆ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆಗೆ ಸರ್ಕಾರ ಆದೇಶ


 36.56 ಲಕ್ಷ ವಿದ್ಯಾರ್ಥಿಗಳಿಗೆ 104 ಕೋಟಿ ರೂ. ವೆಚ್ಚದಲ್ಲಿ ರಾಜ್ಯಮಟ್ಟದ ಖರೀದಿ


ಬೆಂಗಳೂರು, ಮಾರ್ಚ್ 21: 2026-27ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 36.56 ಲಕ್ಷ ವಿದ್ಯಾರ್ಥಿಗಳಿಗೆ ‘ವಿದ್ಯಾವಿಕಾಸ’ ಯೋಜನೆಯಡಿ ಉಚಿತವಾಗಿ ಉತ್ತಮ ಗುಣಮಟ್ಟದ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ಗಳನ್ನು ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.


ಈ ಮಹತ್ವದ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಮವಸ್ತ್ರ ಸಾಮಗ್ರಿಗಳನ್ನು ಒದಗಿಸುವ ಮೂಲಕ ಶಿಕ್ಷಣದಲ್ಲಿ ಸಮಾನತೆ ಮತ್ತು ಸೌಕರ್ಯವನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.


ಸರ್ಕಾರದ ಆದೇಶದ ಪ್ರಕಾರ, ಅಂದಾಜು 104 ಕೋಟಿ ರೂಪಾಯಿ ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ಗಳನ್ನು ರಾಜ್ಯಮಟ್ಟದಲ್ಲಿಯೇ ಖರೀದಿಸಲಾಗುವುದು. ಇದರಿಂದ ಗುಣಮಟ್ಟದಲ್ಲಿ ಏಕರೂಪತೆ ಮತ್ತು ಖರೀದಿ ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಅನುಕೂಲವಾಗಲಿದೆ.


‘ವಿದ್ಯಾವಿಕಾಸ’ ಯೋಜನೆಯು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ. ಈಗಾಗಲೇ ಯೋಜನೆಯಡಿ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಈಗ ಶೂ ಮತ್ತು ಸಾಕ್ಸ್ ವಿತರಣೆಯೂ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿದೆ.


ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಮಯಬದ್ಧವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಮುಂಬರುವ ಶೈಕ್ಷಣಿಕ ಸಾಲಿನ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ತಯಾರಿ ನಡೆಸಲಾಗಿದೆ.

Post a Comment

Previous Post Next Post