Top News

ಬೇಸಿಗೆ ಮುನ್ನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾಧಿ: ಸಚಿವ ಪ್ರಿಯಾಂಕಾ ಖರ್ಗೆ ಆದೇಶ


 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ, 24/7 ನಿಯಂತ್ರಣ ಕೊಠಡಿ, ಕ್ಷಿಪ್ರ ಕಾರ್ಯಪಡೆ ರಚನೆಗೆ ಸೂಚನೆ


ಬೆಂಗಳೂರು, ಮಾರ್ಚ್ 21: ಬೇಸಿಗೆಯ ಕಠಿಣ ಪರಿಸ್ಥಿತಿ ತಂದೊಡ್ಡುವ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ತಡೆಯಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಸಚಿವ ಪ್ರಿಯಾಂಕಾ ಖರ್ಗೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆಗಳನ್ನು ಹೊರಡಿಸಿರುವ ಅವರು, ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳಿನ ಎರಡನೇ ಮತ್ತು ನಾಲ್ಕನೇ ಸೋಮವಾರದಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜೊತೆ ಕುಡಿಯುವ ನೀರಿನ ವಸ್ತುಸ್ಥಿತಿ ಕುರಿತು ಸಭೆ ನಡೆಸಬೇಕು. ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದ್ದಾರೆ.


ಸಮರ್ಪಕ ನಿರ್ವಹಣೆಗಾಗಿ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ 24×7 ನಿಯಂತ್ರಣ ಕೊಠಡಿಗಳನ್ನು ತೆರೆಯಲು ಮತ್ತು ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಿಕೊಂಡು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ.


ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಪರಿಶೀಲಿಸಬೇಕು. ಕೊಳವೆಬಾವಿಗಳ ಸುತ್ತಮುತ್ತ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಲುಷಿತ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೊಳವೆಬಾವಿಯ ಸುತ್ತ ಕಾಂಕ್ರೀಟ್ ಕಟ್ಟೆ ನಿರ್ಮಿಸಿ ಕಲುಷಿತ ನೀರು ಕೊಳವೆಬಾವಿಗೆ ಸೇರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.


ನೀರಿನ ಮೂಲಗಳ ಸುರಕ್ಷತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವಂತೆಯೂ ಸೂಚಿಸಲಾಗಿದೆ.


ಬೇಸಿಗೆಯ ಕುಡಿಯುವ ನೀರಿನ ಸವಾಲನ್ನು ಸಮರ್ಥವಾಗಿ ಎದುರಿಸಲು ಸಮರೋಪಾಧಿಯಲ್ಲಿ ತಯಾರಿ ನಡೆಸುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದ್ಯತೆಯಾಗಿ ಪರಿಗಣಿಸಿದೆ.

Post a Comment

Previous Post Next Post