ಮೈಸೂರು, ಮಾರ್ಚ್ 23: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜರುಗಲಿರುವ ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ) ನಿಮಿತ್ತ ಭಕ್ತರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಮಾರ್ಚ್ 30ರಿಂದ ಏಪ್ರಿಲ್ 03ರವರೆಗೆ ಮೈಸೂರಿನಿಂದ ನಂಜನಗೂಡಿಗೆ (ರೈಲು ಸಂಖ್ಯೆ 06225) ಮತ್ತು ನಂಜನಗೂಡಿನಿಂದ ಮೈಸೂರಿಗೆ (ರೈಲು ಸಂಖ್ಯೆ 06226) ಕಾಯ್ದಿರಿಸದ ವಿಶೇಷ ರೈಲುಗಳನ್ನು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಎರಡೂ ರೈಲುಗಳು ತಲಾ 5 ಟ್ರಿಪ್ಗಳನ್ನು ಹೊಂದಿದ್ದು, ಭಕ್ತರು ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಸಚಿವ ವಿ. ಸೋಮಣ್ಣ ಅವರು, “ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀಕಂಠೇಶ್ವರ ಸ್ವಾಮಿಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರ ಪ್ರಯಾಣದ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರವನ್ನು ವ್ಯವಸ್ಥೆಗೊಳಿಸಲಾಗಿದೆ. ಭಕ್ತಾಧಿಗಳು ಭಾರತೀಯ ರೈಲ್ವೆಯ ಈ ಸೇವೆಯನ್ನು ಸದುಪಯೋಗ ಪಡಿಸಿಕೊಂಡು, ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇನೆ” ಎಂದು ತಿಳಿಸಿದರು.
ಪಂಚ ಮಹಾರಥೋತ್ಸವವು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಪ್ರಮುಖ ವಾರ್ಷಿಕ ಉತ್ಸವಗಳಲ್ಲಿ ಒಂದಾಗಿದ್ದು, ಈ ಸಂದರ್ಭದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ರೈಲ್ವೆ ಇಲಾಖೆಯ ಈ ಕ್ರಮವು ಭಕ್ತರಿಗೆ ನೆರವಾಗಲಿದೆ.

Post a Comment