ಗೃಹರಕ್ಷಕ ದಳ ಮತ್ತು ಸಶಸ್ತ್ರ ಪೊಲೀಸರಿಂದ ನಿಯಮಬಾಹಿರ ವಾಹನ ತಪಾಸಣೆ, ಅಕ್ರಮ ಹಣ ವಸೂಲಿ: ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರಿಂದ ಡಿಜಿಪಿಗೆ ಖಡಕ್ ಪತ್ರ; ಕಟ್ಟುನಿಟ್ಟಿನ ಸುತ್ತೋಲೆಗೆ ಆಗ್ರಹ
ಬೆಂಗಳೂರು: ಮೋಹನ್ ಕುಮಾರ್ ದಾನಪ್ಪ ಅವರು ತಮ್ಮ ಪತ್ರದಲ್ಲಿ, ಮೋಟಾರ್ ವಾಹನ ಕಾಯ್ದೆ-1988 ಮತ್ತು ಕರ್ನಾಟಕ ಮೋಟಾರ್ ವಾಹನ ನಿಯಮಗಳು-1989ರ ಪ್ರಕಾರ, ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎ.ಎಸ್.ಐ) ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ವಾಹನ ತಪಾಸಣೆ ಮತ್ತು ದಂಡ ವಿಧಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳು ಕೇವಲ ಎಫ್.ಟಿ.ವಿ.ಆರ್ ವರದಿಯ ಮೂಲಕ ಟ್ರಾಫಿಕ್ ಚಲನ್ ನೀಡಬಹುದೇ ಹೊರತು, ಸ್ವಂತ ಇಚ್ಛೆಯಿಂದ ವಾಹನಗಳನ್ನು ತಡೆಯುವ ಅಥವಾ ಬೆದರಿಸುವ ಅಧಿಕಾರ ಹೊಂದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಆದರೆ ವಾಸ್ತವದಲ್ಲಿ, ಈ ಯಾವುದೇ ಅಧಿಕಾರವಿಲ್ಲದ ಗೃಹರಕ್ಷಕ ದಳದ ಸಿಬ್ಬಂದಿಗಳು ಮತ್ತು ಠಾಣೆಯ ಗಸ್ತು ವಾಹನಗಳಿಗೆ ಚಾಲಕರಾಗಿ ಕಾರ್ಯನಿರ್ವಹಿಸುವ ಸಶಸ್ತ್ರ ಪಡೆಯ ಪೊಲೀಸರು, ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸರ್ಕಾರಿ ವಾಹನಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ವಾಹನಗಳನ್ನು ಬಲವಂತವಾಗಿ ನಿಲ್ಲಿಸುತ್ತಿದ್ದಾರೆ. ವಾಹನಗಳ ಕೀಲಿಕೈ ಕಿತ್ತುಕೊಳ್ಳುವುದು, ಪ್ರಕರಣ ದಾಖಲಿಸುವುದಾಗಿ ಹೆದರಿಸುವುದು, ಚಾಲಕರ ಮೇಲೆ ಹಲ್ಲೆ ನಡೆಸುವುದು, ಅವಹೇಳನಕಾರಿ ಪದಗಳನ್ನು ಬಳಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕೆ ಇಳಿಯುವಂತಹ ಘಟನೆಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
🚨 ಹಳ್ಳಿ ಹಾಗೂ ಹೆದ್ದಾರಿಗಳಲ್ಲಿ ಹೆಚ್ಚಿದ ದೌರ್ಜನ್ಯ
ಪತ್ರದಲ್ಲಿ ವಿಶೇಷವಾಗಿ ಗಮನಸೆಳೆದಿರುವ ಅಂಶವೆಂದರೆ, ನಗರ ಪ್ರದೇಶಗಳನ್ನು ಬಿಟ್ಟು ಗ್ರಾಮಾಂತರ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳು, ಗ್ರಾಮೀಣ ಹಾಗೂ ನಿರ್ಜನ ಪ್ರದೇಶಗಳು ಮತ್ತು ರಾಜ್ಯ/ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಧಿಕಾರಿಗಳಿಲ್ಲದ ಸಮಯದಲ್ಲಿ ಈ ಸಿಬ್ಬಂದಿಗಳು ರಸ್ತೆಯಲ್ಲಿ ಸಾಗುವ ವಾಹನಗಳನ್ನು ಅಡ್ಡಗಟ್ಟಿ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ಹಣ ವಸೂಲಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
📜 2012 ಮತ್ತು 2017ರ ಸುತ್ತೋಲೆಗಳ ಉಲ್ಲೇಖ
ಮೋಹನ್ ಕುಮಾರ್ ದಾನಪ್ಪ ಅವರು ತಮ್ಮ ಪತ್ರದಲ್ಲಿ, ಬೆಂಗಳೂರು ಸಂಚಾರ ಪೊಲೀಸರು ಈ ಹಿಂದೆಯೇ ಹೊರಡಿಸಿರುವ ಎರಡು ಪ್ರಮುಖ ಸುತ್ತೋಲೆಗಳನ್ನು ಉಲ್ಲೇಖಿಸಿದ್ದಾರೆ. ಅವುಗಳೆಂದರೆ:
- ಅಪರ ಪೊಲೀಸ್ ಆಯುಕ್ತರು, ಸಂಚಾರ ಬೆಂಗಳೂರು ಕಚೇರಿಯ ಸುತ್ತೋಲೆ-106, ದಿನಾಂಕ: 29-12-2012
- ಪೊಲೀಸ್ ಆಯುಕ್ತರ ಕಚೇರಿಯ ಸುತ್ತೋಲೆ-157, ದಿನಾಂಕ: 03-01-2017
ಈ ಸುತ್ತೋಲೆಗಳಲ್ಲಿ ಅನಧಿಕೃತ ವಾಹನ ತಪಾಸಣೆಗೆ ನಿರ್ಬಂಧ ವಿಧಿಸಲಾಗಿದೆ. ಆದರೂ ಈ ಆದೇಶಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಅವರು ತಮ್ಮ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಮೋಟಾರ್ ವಾಹನ ಕಾಯ್ದೆಯಲ್ಲಿ ನಿಗದಿಪಡಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯ ಗೃಹ ರಕ್ಷಕದಳ ಹಾಗೂ ಎಲ್ಲಾ ಘಟಕದ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ಸಾರ್ವಜನಿಕ ಹಾಗೂ ಇತರೆ ಯಾವುದೇ ವಾಹನಗಳನ್ನು ತಡೆಯದಂತೆ, ತಪಾಸಣೆ ಮಾಡದಂತೆ ಕಟ್ಟುನಿಟ್ಟಿನ ಸೂಕ್ತ ಆದೇಶ/ಸುತ್ತೋಲೆಯನ್ನು ಹೊರಡಿಸಬೇಕು."
👮 ದಿನದ ರೋಲ್ ಕಾಲ್‌ನಲ್ಲಿ ಎಚ್ಚರಿಕೆ ನೀಡಲು ಸೂಚನೆ
ಇಂತಹ ದುರ್ನಡತೆಗಳು ಮರುಕಳಿಸದಂತೆ ಆಯಾ ಠಾಣೆ ಮತ್ತು ಘಟಕಗಳಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ರೋಲ್ ಕಾಲ್ ಸಮಯದಲ್ಲಿ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಎಚ್ಚರಿಕೆ ನೀಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ಅಲ್ಲದೆ, ಈ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ಮಾಹಿತಿ ನೀಡುವಂತೆಯೂ ಅವರು ಡಿಜಿಪಿಯವರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ನೊಂದ ಸಾರ್ವಜನಿಕರು ದೂರವಾಣಿ ಮೂಲಕ ಹಾಗೂ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಬಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದೀಗ ಡಿಜಿಪಿ ಕಚೇರಿಯಿಂದ ಈ ಕುರಿತು ಸೂಕ್ತ ಸುತ್ತೋಲೆ ಹೊರಡಿಸುವ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.

Post a Comment